

ಹೈದರಾಬಾದ್: ಸದಾ ತಮ್ಮ ಕ್ರೀಡೆಯ ಬಗ್ಗೆ ಮಾತನಾಡುವ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಇತ್ತೀಚಿನ ಸಂದರ್ಶನವೊಂದರಲ್ಲಿ ಟಾಲಿವುಡ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅದರಲ್ಲೂ ನಟ ವಿಜಯ್ ದೇವರಕೊಂಡ ಸಿನಿಮಾಗಳ ಬಗ್ಗೆ ಸಿಂಧು ಮಾಡಿರುವ ಕಾಮೆಂಟ್ಸ್ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಸಿಂಧು ಮಾತನಾಡಿದರು. ಬ್ಯಾಡ್ಮಿಂಟನ್ ಒತ್ತಡವನ್ನು ನಿವಾರಿಸಿಕೊಳ್ಳಲು ನಾನು ಸಿನಿಮಾಗಳನ್ನು ನೋಡುತ್ತೇನೆ. ನಟರಾದ ಪ್ರಭಾಸ್, ಎನ್ಟಿಆರ್ ಮತ್ತು ರಾಮ್ಚರಣ್ ಅಭಿನಯ ನನಗೆ ತುಂಬಾ ಇಷ್ಟ ಎಂದರು.
ನಾನು ವಿಜಯ ದೇವರಕೊಂಡ ಅವರ ಚಿತ್ರಗಳನ್ನೂ ನೋಡಿದ್ದೇನೆ. ಆದರೆ, ಕೆಲವು ಚಿತ್ರಗಳು ನನಗೆ ಇಷ್ಟವಾಗಲಿಲ್ಲ. ನಾನೇನಾದರೂ ಆ ಚಿತ್ರಗಳು ಯಾವುವು ಎಂದು ಹೇಳಿದರೆ, ಅದು ವಿವಾದವಾಗಿಬಿಡುತ್ತದೆ. ನಾನು ಇಷ್ಟಪಡದ ಸಿನಿಮಾಗಳು ಬೇರೆಯವರಿಗೆ ಇಷ್ಟವಾಗಬಹುದು. ಪ್ರತಿಯೊಬ್ಬರಿಗೂ ಅವರದೇಯಾದ ಅಭಿಪ್ರಾಯಗಳು ಇರುತ್ತವೆ ಎಂದು ಹೇಳಿದರು.
ಯಾವುದೇ ನಾಯಕನಾದರೂ ಯಶಸ್ಸು ಗಳಿಸುತ್ತಾನೆ ಎಂಬ ನಂಬಿಕೆಯಿಂದಲೇ ಸಿನಿಮಾಗಳು ನಿರ್ಮಾಣವಾಗುತ್ತವೆ. ಅವರ ಮೇಲೂ ಒತ್ತಡವಿದೆ. ಸಿನಿಮಾ ಹಿಟ್ ಆಗುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ತಿಂಗಳುಗಟ್ಟಲೆ ಚಿತ್ರೀಕರಣ ನಡೆಯಲಿದೆ. ಅವರ ಕಷ್ಟಗಳನ್ನು ಕೀಳಾಗಿ ಕಾಣಬಾರದು ಎಂದು ಸಿಂಧು ಕರೆ ನೀಡಿದರು.
ಈ ಹಿಂದೆ ಸಿಂಧು, ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಚಾರವಿತ್ತು. ಆದರೆ ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಿಂಧು ನಿರಾಕರಿಸಿದ್ದಾರೆ. ನಟಿಸುವ ಯೋಜನೆ ಇಲ್ಲ ಎಂದಿದ್ದಾರೆ. ಸದ್ಯ ಆಕೆಯ ಗಮನ ಆಟದ ಮೇಲಿದೆ. ತನ್ನ ಬಯೋಪಿಕ್ ಸಿನಿಮಾ ಮಾಡಿದರೆ ಅದರಲ್ಲಿ ದೀಪಿಕಾ ಪಡುಕೋಣೆಯಂತಹ ಬ್ಯಾಡ್ಮಿಂಟನ್ ಬಲ್ಲ ನಾಯಕಿ ನಟಿಸಿದರೆ ಚೆನ್ನಾಗಿರುತ್ತದೆ ಎನ್ನುವುದು ಸಿಂಧು ನಂಬಿಕೆಯಾಗಿದೆ. (ಏಜೆನ್ಸೀಸ್)