ಪಿವಿ ಸಿಂಧುಗೆ ಕನ್ನಡಿಗ ಅನುಪ್​ ಶ್ರೀಧರ್​ ಹೊಸ ಕೋಚ್​

web sindhu
Published on

ಹೈದರಾಬಾದ್​: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಪದಕ ಜಯಿಸುವ ಕನಸು ಭಗ್ನಗೊಂಡ ಬಳಿಕ ವಿಶ್ರಾಂತಿಯಲ್ಲಿದ್ದ ಪಿವಿ ಸಿಂಧು ಈಗ ಮತ್ತೆ ಅಭ್ಯಾಸ ಆರಂಭಿಸಿದ್ದು, ಕನ್ನಡಿಗ ಅನುಪ್​ ಶ್ರೀಧರ್​ ಹೊಸ ಕೋಚ್​ ಆಗಿ ಸಾಥ್​ ನೀಡಿದ್ದಾರೆ. 2026ರ ಏಷ್ಯನ್​ ಗೇಮ್ಸ್​ನಲ್ಲಿ ಸ್ವರ್ಣ ಪದಕ ಗೆಲ್ಲುವುದು ಸಿಂಧು ಅವರ ಮುಂದಿನ ಪ್ರಮುಖ ಗುರಿಯಾಗಿದ್ದು, 2028ರ ಲಾಸ್​ ಏಂಜಲಿಸ್​ ಒಲಿಂಪಿಕ್ಸ್​ನಲ್ಲೂ ಕಣಕ್ಕಿಳಿಯುವ ಮಹಾತ್ವಾಕಾಂಕ್ಷೆ ಹೊಂದಿದ್ದಾರೆ.

"ಸಿಂಧು ಹೈದರಾಬಾದ್​ನ ಗಚ್ಚಿಬೌಳಿ ಸ್ಟೇಡಿಯಂನಲ್ಲಿ ಈಗಾಗಲೆ ಅಭ್ಯಾಸ ಆರಂಭಿಸಿದ್ದಾಳೆ. ಅಕ್ಟೋಬರ್​ 8ರಿಂದ 13ರವರೆಗೆ ಫಿನ್​ಲ್ಯಾಂಡ್​ನಲ್ಲಿ ನಡೆಯಲಿರುವ ಆರ್ಕ್ಟಿಕ್​ ಓಪನ್​ನಲ್ಲಿ ಮರಳಿ ಕಣಕ್ಕಿಳಿಯಲಿದ್ದಾಳೆ' ಎಂದು ಸಿಂಧು ತಂದೆ ಪಿವಿ ರಮಣ ತಿಳಿಸಿದ್ದಾರೆ.

ಪ್ಯಾರಿಸ್​ ಒಲಿಂಪಿಕ್ಸ್​ಗೆ ಮುನ್ನ ಪಿವಿ ಸಿಂಧು ಕನ್ನಡಿಗ ಪ್ರಕಾಶ್​ ಪಡುಕೋಣೆ ಮಾರ್ಗದರ್ಶನದಲ್ಲಿ ಬೆಂಗಳೂರಿನಲ್ಲೇ ಅಭ್ಯಾಸ ನಡೆಸಿದ್ದರು. ಆದರೆ ಸಿಂಧು ಇನ್ನು ಹೈದರಾಬಾದ್​ನಲ್ಲೇ ಅಭ್ಯಾಸ ನಡೆಸಲಿದ್ದಾರೆ ಎಂದು ರಮಣ ಸ್ಪಷ್ಟಪಡಿಸಿದ್ದಾರೆ. ಪಿವಿ ಸಿಂಧು ಪ್ಯಾರಿಸ್​ನಲ್ಲಿ ಪ್ರಿ ಕ್ವಾರ್ಟರ್​​ಫೈನಲ್​ ಹಂತದಲ್ಲೇ ಸೋತು ಸತತ 3ನೇ ಬಾರಿ ಒಲಿಂಪಿಕ್ಸ್​ ಪದಕ ಜಯಿಸುವ ಅವಕಾಶದಿಂದ ವಂಚಿತರಾಗಿದ್ದರು.

ಕರ್ನಾಟಕದ ಮಾಜಿ ಷಟ್ಲರ್​ ಹಾಗೂ ಒಲಿಂಪಿಯನ್​ ಕೂಡ ಆಗಿರುವ 41 ವರ್ಷದ ಅನುಪ್​ ಶ್ರೀಧರ್​, ಬೆಂಗಳೂರಿನಲ್ಲಿ ಲಕ್ಷ್ಯ ಸೇನ್​ಗೆ ಮಾರ್ಗದರ್ಶನ ನೀಡುತ್ತಿದ್ದರು. ಈಗ ಆರ್ಕ್ಟಿಕ್​ ಓಪನ್​ ಜತೆಗೆ ಡೆನ್ಮಾರ್ಕ್​ ಓಪನ್​ಗೆ ತಾತ್ಕಾಲಿಕ ಕೋಚ್​ ಆಗಿ ಸಿಂಧು ಜತೆ ತೆರಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net