ಸಿಂಧು 3 ವರ್ಷ ವಿಶ್ವ ಚಾಂಪಿಯನ್: ಒಲಿಂಪಿಕ್ಸ್ ಮುಂದೂಡಿಕೆಯಿಂದ 2021ರ ವಿಶ್ವ ಚಾಂಪಿಯನ್​ಷಿಪ್ ಡೌಟ್

PV Sindhu
Published on

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವುದರಿಂದ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ 3 ವರ್ಷಗಳ ಕಾಲ ವಿಶ್ವ ಚಾಂಪಿಯನ್ ಆಗಿ ಉಳಿಯುವ ಅವಕಾಶದ ನಿರೀಕ್ಷೆ ಇದೆ. ಪಿವಿ ಸಿಂಧು ಕಳೆದ ವರ್ಷದ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಮುಂದಿನ ವಿಶ್ವ ಚಾಂಪಿಯನ್​ಷಿಪ್ 2021ರ ಆಗಸ್ಟ್​ನಲ್ಲಿ ಸ್ಪೇನ್ ಆತಿಥ್ಯದಲ್ಲಿ ನಿಗದಿಯಾಗಿದೆ. ಆದರೆ ಟೋಕಿಯೊ ಒಲಿಂಪಿಕ್ಸ್ ಮುಂದಿನ ವರ್ಷ ಜುಲೈನಲ್ಲಿ ಮರುನಿಗದಿಯಾಗಿರುವುದರಿಂದ ಅದರ ಬೆನ್ನಲ್ಲೇ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್ ನಡೆಯುವುದು ಅನುಮಾನವೆನಿಸಿದೆ. ಬಿಡಬ್ಲ್ಯುಎಫ್​ನ ಹಾಲಿ ಕ್ಯಾಲೆಂಡರ್ ಪ್ರಕಾರ 2021ರ ನವೆಂಬರ್​ವರೆಗೂ ವಿಶ್ವ ಚಾಂಪಿಯನ್​ಷಿಪ್ ಮರುನಿಗದಿಗೆ ಅವಕಾಶವಿಲ್ಲ. 2006ರಿಂದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್ ಪ್ರತಿ ವರ್ಷ ನಡೆಯುತ್ತ ಬಂದಿದೆ. ಆದರೆ ಒಲಿಂಪಿಕ್ಸ್ ವರ್ಷಗಳಲ್ಲಿ ವಿಶ್ವ ಚಾಂಪಿಯನ್​ಷಿಪ್ ನಡೆಯುವುದಿಲ್ಲ. ಹೀಗಾಗಿ ಈ ವರ್ಷ ವಿಶ್ವ ಚಾಂಪಿಯನ್​ಷಿಪ್ ನಿಗದಿಯಾಗಿಲ್ಲ. ಆದರೆ 2021ರ ವಿಶ್ವ ಚಾಂಪಿಯನ್​ಷಿಪ್ 2022ಕ್ಕೆ ಮುಂದೂಡಿಕೆಯಾದರೆ ಆಗ ಸಿಂಧು 3 ವರ್ಷ ಕಾಲ ವಿಶ್ವ ಚಾಂಪಿಯನ್ ಎಂದು ಕರೆಸಿಕೊಳ್ಳಲಿದ್ದಾರೆ.

ಆದರೆ ಈ ಬೆಳವಣಿಗೆಗೆ ಪಿವಿ ಸಿಂಧು ಖುಷಿಯಾಗಿಲ್ಲ. ‘ಮುಂದಿನ ಬ್ಯಾಡ್ಮಿಂಟನ್ ಟೂರ್ನಿ ಯಾವಾಗ ಆರಂಭವಾಗಲಿದೆ ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ. ವಿಶ್ವ ಚಾಂಪಿಯನ್​ಷಿಪ್, ಒಲಿಂಪಿಕ್ಸ್ ಮುಂದೂಡಿಕೆಗಳ ಬಗ್ಗೆ ಈಗ ಚರ್ಚೆಗಳು ನಡೆಯುತ್ತಿವೆ. ಆದರೆ ಕ್ರೀಡಾ ಚಟುವಟಿಕೆಗಳು ಬೇಗನೆ ಪುನರಾರಂಭಗೊಳ್ಳಲಿ ಎಂಬುದೇ ಈಗ ನಮ್ಮ ಪ್ರಾರ್ಥನೆಯಾಗಿದೆ’ ಎಂದು ಸಿಂಧು ಹೇಳಿದ್ದಾರೆ. ಲಾಕ್​ಡೌನ್​ನಿಂದಾಗಿ ಸಿಂಧು ಸದ್ಯ, ಕಳೆದೊಂದು ದಶಕದಲ್ಲೇ ಮೊದಲ ಬಾರಿಗೆ ಬ್ಯಾಡ್ಮಿಂಟನ್ ಕೋರ್ಟ್​ನಿಂದ ಇಷ್ಟು ಸುದೀರ್ಘ ಅವಧಿಯ ಬಿಡುವು ಪಡೆದಿದ್ದಾರೆ.

ಸಿಂಧು ಕ್ವಾರಂಟೈನ್ ಮುಕ್ತಾಯ

ಇಂಗ್ಲೆಂಡ್​ನಲ್ಲಿ ನಡೆದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ನಿಂದ ಮಾರ್ಚ್ 15ರಂದು ತವರಿಗೆ ಮರಳಿದ ಪಿವಿ ಸಿಂಧು, ಸರ್ಕಾರದ ನಿಯಮದಂತೆ ಮನೆಯಲ್ಲೇ ಸ್ವಯಂ ದಿಗ್ಬಂಧನದಲ್ಲಿದ್ದರು. ಅವರ ಕ್ವಾರಂಟೈನ್ ಅವಧಿ ಭಾನುವಾರಕ್ಕೆ ಮುಕ್ತಾಯಗೊಂಡಿದ್ದು, ಕರೊನಾ ಸೋಂಕಿನ ಭೀತಿಯಿಂದ ಪಾರಾಗಿದ್ದಾರೆ. ಅವರ ಕ್ವಾರಂಟೈನ್​ನ 14 ದಿನಗಳ ಅವಧಿ ಮಾರ್ಚ್ 28ರಂದೇ ಮುಕ್ತಾಯಗೊಂಡಿದ್ದರೂ, ಸ್ಥಳೀಯ ಆರೋಗ್ಯ ಅಧಿಕಾರಿಗಳ ಸೂಚನೆಯ ಮೇರೆಗೆ ಏಪ್ರಿಲ್ 5ರವರೆಗೂ ಸ್ವಯಂ ದಿಗ್ಬಂಧನದಲ್ಲಿ ಮುಂದುವರಿದಿದ್ದರು. ‘ಸ್ಥಳೀಯ ಪೊಲೀಸ್ ಅಧಿಕಾರಿಗಳೂ ನಮ್ಮ ಮನೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ಸದ್ಯ ಕರೊನಾ ಹಾವಳಿ ಹೆಚ್ಚಾಗಿರುವ ಬ್ರಿಟನ್​ನಿಂದ ಮರಳಿದ್ದರಿಂದ ಏಪ್ರಿಲ್ 5ರವರೆಗೂ ಕ್ವಾರಂಟೈನ್​ನಲ್ಲಿರಲು ಸೂಚಿಸಲಾಗಿತ್ತು. ನಮ್ಮ ಮನೆಯ ಎದುರು ಸ್ಟಿಕ್ಕರ್ ಅಂಟಿಸಲಾಗಿತ್ತು ಮತ್ತು ನಮ್ಮ ಪಾಸ್​ಪೋರ್ಟ್​ಗಳನ್ನೂ ವಶಕ್ಕೆ ಪಡೆಯಲಾಗಿತ್ತು. ಬ್ರಿಟನ್​ನಿಂದ ಮರಳಿದ ಎಲ್ಲರಿಗೂ ಇಂಥದ್ದೇ ಸೂಚನೆಗಳನ್ನು ನೀಡಲಾಗಿತ್ತು’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net