ಪ್ಯಾರಿಸ್​ ಒಲಿಂಪಿಕ್ಸ್​ಗೆ ನೇರಳೆ ಟ್ರ್ಯಾಕ್​​! ಹೊಸ ಬಣ್ಣದ ಅಂಗಳದಲ್ಲಿ ಹೆಚ್ಚಿನ ದಾಖಲೆಗಳು ನಿರ್ಮಾಣವಾಗುವ ನಿರೀಕ್ಷೆ

web purple
Published on

ಪ್ಯಾರಿಸ್​: ಅಥ್ಲೆಟಿಕ್ಸ್​ ಸ್ಪರ್ಧೆಗಳಲ್ಲಿ ಸಾಮಾನ್ಯವಾಗಿ ಓಟದ ಟ್ರ್ಯಾಕ್​ಗಳು ಮಣ್ಣಿನ ಅಥವಾ ತಿಳಿ ಕಂದು ಬಣ್ಣವನ್ನು ಹೊಂದಿರುತ್ತವೆ. ಆದರೆ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಅಥ್ಲೀಟ್​ಗಳು ನೇರಳೆ ಅಥವಾ ಲ್ಯಾವೆಂಡರ್​ ಬಣ್ಣದ ಟ್ರ್ಯಾಕ್​ನಲ್ಲಿ ಓಡಲಿದ್ದಾರೆ. ಒಲಿಂಪಿಕ್ಸ್​ನಲ್ಲಿ ಅಥ್ಲೆಟಿಕ್ಸ್​ ಸ್ಪರ್ಧೆಗಳು ನಡೆಯಲಿರುವ ಸ್ಟೇಡ್​ ಡಿ ಫ್ರಾನ್ಸ್​ ಸ್ಟೇಡಿಯಂನಲ್ಲಿ ಈಗಾಗಲೆ ನೇರಳೆ ಬಣ್ಣದ ಟ್ರ್ಯಾಕ್​ಗಳನ್ನು ಅಳವಡಿಸಲಾಗಿದ್ದು, ಇದಕ್ಕಾಗಿ ಅನುಸರಿಸಲಾಗಿರುವ ಹೊಸ ಕಟ್ಟಿಂಗ್​-ಎಡ್ಜ್​ ತಂತ್ರಜ್ಞಾನದಿಂದಾಗಿ ಈ ಬಾರಿ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಹೆಚ್ಚಿನ ದಾಖಲೆಗಳು ನಿರ್ಮಾಣವಾಗುವ ನಿರೀಕ್ಷೆ ಹರಡಿದೆ. ಭಾರತದ ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ ಅವರ ಎಸೆತದ ಶೈಲಿಗೂ ಈ ಟ್ರ್ಯಾಕ್​ ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಒಲಿಂಪಿಕ್ಸ್​ ಒಲಿಂಪಿಕ್ಸ್​ ಗೇಮ್ಸ್​ ಸಂಟಕರು ಈ ಬಾರಿ ಅಥ್ಲೆಟಿಕ್ಸ್​ ಟ್ರ್ಯಾಕ್​ಗೆ ನೇರಳೆ ಬಣ್ಣ ಆರಿಸಲು ಕಾರಣ ಸರಳವಾಗಿದೆ. ಈ ಸಲದ ಒಲಿಂಪಿಕ್ಸ್​ ಗೇಮ್ಸ್​ ನೀಲಿ, ಹಸಿರು ಮತ್ತು ನೇರಳ ಬಣ್ಣದ ಥೀಮ್​ ಒಳಗೊಂಡಿದೆ. ಕ್ರೀಡಾಕೂಟದ ಎಲ್ಲ ತಾಣಗಳಲ್ಲಿ ಇದೇ ಬಣ್ಣಗಳು ಎದ್ದು ಕಾಣಲಿವೆ. ಇದೇ ನಿಟ್ಟಿನಲ್ಲಿ ಅಥ್ಲೆಟಿಕ್ಸ್​ ಟ್ರ್ಯಾಕ್​ಗೂ ದೃಶ್ಯ ಆಕರ್ಷಣೆಯ ನೇರಳ ಬಣ್ಣವನ್ನು ನೀಡಲಾಗಿದೆ.

1976ರ ಮಾಂಟ್ರಿಯಲ್​ ಒಲಿಂಪಿಕ್ಸ್​ನಿಂದಲೂ ಇಟಲಿ ಮೂಲದ "ಮೊಂಡೋ ಗ್ರೂಪ್​', ಒಲಿಂಪಿಕ್ಸ್​ನ ಅಥ್ಲೆಟಿಕ್ಸ್​ ಕ್ರೀಡಾಂಗಣದ ಟ್ರ್ಯಾಕ್​ಗಳಿಗೆ ತನ್ನ ಕಂಪನಿಯ ಪ್ರಿಫ್ಯಾಬ್ರಿಕೇಟೆಡ್​ ರಬ್ಬರ್​ಗಳನ್ನು ಪೂರೈಸುತ್ತ ಬಂದಿದೆ. ಈ ಸಲವೂ ಅದೇ ಟ್ರ್ಯಾಕ್​ಗಳನ್ನು ಸಿದ್ಧಪಡಿಸಿದ್ದು, ವಿಶ್ವದ ಅಗ್ರ ಅಥ್ಲೀಟ್​ಗಳ ಸಲಹೆ-ಸೂಚನೆಗಳನ್ನು ಪರಿಗಣನೆಗೆ ತೆಗೆದುಕೊಂಡು, ಅತ್ಯಂತ ವೇಗವಾಗಿ ಓಡಲು ನೆರವಾಗುವಂಥ ನೇರಳೆ ಬಣ್ಣದ ವೇಗವರ್ಧಕ ಟ್ರ್ಯಾಕ್​ಗಳನ್ನು ಸಿದ್ಧಪಡಿಸಿದೆ.

ಮೊಂಡೋ ಟ್ರ್ಯಾಕ್​ಗಳು ಎರಡು ಪದರಗಳನ್ನು ಒಳಗೊಂಡಿರುತ್ತವೆ. ಮೇಲ್ಮೆಯನ್ನು ವಲ್ಕನೈಸ್​ ರಬ್ಬರ್​ನಿಂದ ಮಾಡಲಾಗಿದ್ದು, ಉತ್ತಮ ಹಿಡಿತವನ್ನು ಒದಗಿಸುತ್ತದೆ. ಹೊರಗಿನ ಮೇಲ್ಮೆಯ ಕೆಳಗೆ ಗಾಳಿ ತುಂಬಿದ ಕುಳಿಗಳ ಪದರವು ಶಾಕ್​ ಅಬ್ಸರ್ಬರ್​ಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಸರಳವಾಗಿ ಹೇಳುವುದಾದರೆ ಸರಿಯಾದ ಬೌನ್ಸ್​ ಒದಗಿಸುತ್ತದೆ. ಮೊಂಡೋ ಟ್ರ್ಯಾಕ್​ಗಳು ವಿಶ್ವದ ಅತ್ಯಂತ ವೇಗದ ಟ್ರ್ಯಾಕ್​ಗಳೆಂದೂ ಪರಿಗಣಿಸಲ್ಪಡುತ್ತವೆ.
ಈ ವಿನೂತನ ತಂತ್ರಜ್ಞಾನದ ಹೊಸ ಟ್ರ್ಯಾಕ್​ಗಳು ಅಥ್ಲೀಟ್​ಗಳಿಗೆ ಅತ್ಯಂತ ವೇಗವಾಗಿ ಓಡಲು ನೆರವಾಗುತ್ತವೆ ಎಂಬುದು ಮೊಂಡೋ ಟ್ರ್ಯಾಕ್​ ಕಂಪನಿಯ ವಾದವಾಗಿದೆ. ಹೀಗಾಗಿ ಸಹಜವಾಗಿಯೇ ಈ ಬಾರಿ ಪ್ಯಾರಿಸ್​ನಲ್ಲಿ ಹೆಚ್ಚಿನ ಅಥ್ಲೀಟ್​ಗಳಿಂದ ಹೊಸ ದಾಖಲೆಗಳು ನಿರ್ಮಾಣವಾಗುವ ನಿರೀಕ್ಷೆ ಇಡಲಾಗಿದೆ.

ನೀರಜ್​ಗೂ ನೆರವು?
ಹೆಚ್ಚಿನ ಸಮಯದಲ್ಲಿ ಯುರೋಪಿಯನ್​ ಮೈದಾನಗಳಲ್ಲೇ ಅಭ್ಯಾಸ ಮತ್ತು ಸ್ಪರ್ಧೆ ನಡೆಸುವ ಒಲಿಂಪಿಕ್ಸ್​ ಮತ್ತು ವಿಶ್ವ ಚಾಂಪಿಯನ್​ ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ, ಭಾರತದಲ್ಲೂ ಮೊಂಡೋ ಟ್ರ್ಯಾಕ್​ಗಳನ್ನು ಅಳವಡಿಸಬೇಕೆಂದು ಈ ಹಿಂದಿನಿಂದಲೂ ಒತ್ತಾಯಿಸುತ್ತ ಬಂದಿದ್ದಾರೆ. ಇನ್ನು ಜಾವೆಲಿನ್​ ಎಸೆತದಲ್ಲಿ ನೀರಜ್​ ಪವರ್​ ಥ್ರೋವರ್​ ಅಲ್ಲ. ಅಂದರೆ ತನ್ನ ದೇಹದ ಮೇಲ್ಭಾಗದ ದೊಡ್ಡ ಸ್ನಾಯುಗಳನ್ನು ಮಾತ್ರ ಅವರು ಅವಲಂಬಿಸಿಲ್ಲ. ಅವರು ಆವರ್ತನ ತಂತ್ರವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಾರೆ. ಇದರಲ್ಲಿ ಅವರು ಟ್ರ್ಯಾಕ್​ನಲ್ಲಿ ವೇಗವಾಗಿ ಓಡಿ ಗಾಳಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ತನ್ನ ದೇಹವನ್ನು ಚಾಚಿ ಈಟಿ ಎಸೆಯುತ್ತಾರೆ. ಅವರ ಈ ತಂತ್ರವು ಮೊಂಡೋದಂಥ ವೇಗದ ಟ್ರ್ಯಾಕ್​ಗಳಿಗೆ ಹೆಚ್ಚು ಸೂಕ್ತವಾದುದು. ಮೊಂಡೋ ಟ್ರ್ಯಾಕ್​ ಉತ್ತಮ ಗ್ರಿಪ್​ ಕೂಡ ಒದಗಿಸುತ್ತವೆ. ಇದು 90 ಮೀಟರ್​ಗಿಂತಲೂ ಅಧಿಕ ದೂರ ಜಾವೆಲಿನ್​ ಎಸೆಯುವ ನೀರಜ್​ ಅವರ ಗುರಿಯನ್ನು ತಲುಪಲು ಕೂಡ ಸಹಾಯಕವಾಗಲಿದೆ ಎನ್ನಲಾಗಿದೆ.

ನಿಖರ ಬಣ್ಣದ ನಿಯಮವಿಲ್ಲ
ಅಥ್ಲೆಟಿಕ್ಸ್​ ಸ್ಪರ್ಧೆಗಳು ಹೆಚ್ಚಾಗಿ ಇಟ್ಟಿಗೆ ಬಣ್ಣದ ಟ್ರ್ಯಾಕ್​ನಲ್ಲಿ ನಡೆಯುತ್ತವೆ. ಆದರೆ ಇಂಥದ್ದೇ ರ್ನಿದಿಷ್ಟ ಬಣ್ಣದ ಟ್ರ್ಯಾಕ್​ನಲ್ಲಿ ಅಥ್ಲೆಟಿಕ್ಸ್​ ಸ್ಪರ್ಧೆ ನಡೆಸಬೇಕೆಂಬ ನಿಯಮವಿಲ್ಲ. ಹೀಗಾಗಿ 2016ರ ರಿಯೋ ಒಲಿಂಪಿಕ್ಸ್​ ವೇಳೆ ಮೊದಲ ಬಾರಿಗೆ ಇಟ್ಟಿಗೆ ಬಣ್ಣದ ಸಿಂಥೆಟಿಕ್​ ಟ್ರ್ಯಾಕ್​ ಬಳಸಿರಲಿಲ್ಲ. ಆಗ ನೀಲಿ ಟ್ರ್ಯಾಕ್​ ಮೇಲೆ ಅಥ್ಲೆಟಿಕ್ಸ್​ ಸ್ಪರ್ಧೆ ನಡೆದಿತ್ತು. 2021ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಮತ್ತೆ ಇಟ್ಟಿಗೆ ಬಣ್ಣದ ಟ್ರ್ಯಾಕ್​ನಲ್ಲಿ ಅಥ್ಲೆಟಿಕ್ಸ್​ ಸ್ಪರ್ಧೆ ನಡೆದಿತ್ತು.

ಮಾನಸಿಕ ಬಲ ತುಂಬುವ ಬಣ್ಣ
ಪ್ಯಾರಿಸ್​ ಒಲಿಂಪಿಕ್ಸ್​ ಥೀಮ್​ ಮತ್ತು ನೇರ-ಟಿವಿ ವೀಕ್ಷಣೆಗೆ ಆಕರ್ಷಕವಾಗಿರುವ ಜತೆಗೆ ನೇರಳೆ ಬಣ್ಣದ ಟ್ರ್ಯಾಕ್​ ಆಯ್ಕೆಗೆ ಮನೋವೈಜ್ಞಾನಿಕ ಕಾರಣವೂ ಇದೆ. ನೇರಳೆ ಬಣ್ಣವನ್ನು ಧೈರ್ಯಶಾಲಿ, ಶಕ್ತಿಯುತ ಮತ್ತು ಸೃಜನಾತ್ಮಕತೆಯ ಪ್ರತಿಕ ಎನ್ನಲಾಗುತ್ತದೆ. ಹೀಗಾಗಿ ಈ ಬಣ್ಣ ಅಥ್ಲೀಟ್​ಗಳಿಗೆ ಸ್ಪರ್ಧೆಯ ವೇಳೆ ಮಾನಸಿಕ ಬಲವನ್ನೂ ತುಂಬಲಿದೆ ಎಂದೂ ಬಣ್ಣಿಸಲಾಗಿದೆ.

9: ನೇರಳೆ ಬಣ್ಣದ ಅಥ್ಲೆಟಿಕ್ಸ್​ ಟ್ರ್ಯಾಕ್​ನಲ್ಲಿ ಲೇನ್​ಗಳ ಸಂಖ್ಯೆಯನ್ನು 8ರಿಂದ 9ಕ್ಕೆ ಏರಿಸಲಾಗಿದೆ. ಕ್ರೀಡಾಂಗಣದಲ್ಲಿ ಒಟ್ಟಾರೆ 17,000 ಚದರ ಮೀಟರ್​ ವಿಸ್ತೀರ್ಣದಲ್ಲಿ ಈ ನೇರಳೆ ಬಣ್ಣ ವ್ಯಾಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net