

ಧರ್ಮಶಾಲಾ: ಪ್ಲೇಆಫ್ ಸ್ಥಾನಕ್ಕಾಗಿ ನಿಕಟ ಪೈಪೋಟಿ ನಡೆಸುತ್ತಿರುವ ತಂಡಗಳಾದ ಪಂಜಾಬ್ ಕಿಂಗ್ಸ್ ಮತ್ತು ಲಖನೌ ಸೂಪರ್ಜೈಂಟ್ಸ್, ಐಪಿಎಲ್ 18ನೇ ಆವೃತ್ತಿಯಲ್ಲಿ ಭಾನುವಾರ ರಾತ್ರಿ ಮುಖಾಮುಖಿ ಆಗಲಿವೆ. ಪಂಜಾಬ್ ತಂಡದ ಎರಡನೇ ತವರು ತಾಣವಾದ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಈ ಕಾದಾಟ ನಡೆಯಲಿದ್ದು, ಗೆದ್ದ ತಂಡ ಪ್ಲೇಆಫ್ ಅವಕಾಶ ಹೆಚ್ಚಿಸಿಕೊಳ್ಳಲಿದೆ.
ಒಂದು ತಿಂಗಳ ಹಿಂದೆ ಲಖನೌದಲ್ಲಿ ನಡೆದಿದ್ದ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಪಂಜಾಬ್ ತಂಡ 8 ವಿಕೆಟ್ಗಳಿಂದ ಗೆದ್ದಿತ್ತು. ಇದೇ ವಿಶ್ವಾಸದಲ್ಲಿ ಶ್ರೇಯಸ್ ಅಯ್ಯರ್ ಪಡೆ ಈ ಸಲವೂ ಕಣಕ್ಕಿಳಿಯಲಿದ್ದರೆ, ರಿಷಭ್ ಪಂತ್ ಬಳಗ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಇದುವರೆಗೆ ಭಾರತೀಯ ಕ್ರಿಕೆಟಿಗರ ಆಟದಿಂದಲೇ ಹೆಚ್ಚಿನ ಯಶ ಕಂಡಿರುವ ಪಂಜಾಬ್ ವಿದೇಶಿಯರಿಂದಲೂ ಉತ್ತಮ ಕೊಡುಗೆಯ ನಿರೀೆಯಲ್ಲಿತ್ತು. ಈ ನಡುವೆ ಗ್ಲೆನ್ ಮ್ಯಾಕ್ಸ್ವೆಲ್ ಕೈಬೆರಳು ಮುರಿತದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಗೈರಿನಲ್ಲಿ ಅಜ್ಮತ್ಉಲ್ಲಾ ಒಮರ್ಜಾಯಿ ಅಥವಾ ಆರನ್ ಹಾರ್ಡಿ ಹೆಚ್ಚಿನ ಅವಕಾಶ ಪಡೆಯಬಹುದು. ಅರ್ಷದೀಪ್, ಚಾಹಲ್, ಜಾನ್ಸೆನ್ ಯಶಸ್ಸಿನಿಂದ ಪಂಜಾಬ್ ಬೌಲಿಂಗ್ ವಿಭಾಗವೂ ಹೆಚ್ಚಿನ ಬಲ ಪಡೆದುಕೊಂಡಿದೆ.
ಪಂಜಾಬ್ಗೆ ವ್ಯತಿರಿಕ್ತವಾಗಿ ಲಖನೌ ತಂಡದ ಬ್ಯಾಟಿಂಗ್ ವಿಭಾಗ ವಿದೇಶಿಯರನ್ನೇ ಹೆಚ್ಚು ಅವಲಂಬಿಸಿದೆ. ಪೂರನ್ (377), ಮಿಚೆಲ್ ಮಾರ್ಷ್ (344), ಮಾರ್ಕ್ರಮ್ (326) ಕ್ಲಿಕ್ ಆದರಷ್ಟೇ ಯಶ ಕಾಣುವ ಸ್ಥಿತಿ ಲಖನೌ ತಂಡದ್ದಾಗಿದೆ. ನಾಯಕ ರಿಷಭ್ ಪಂತ್ ರನ್ಬರ ತಂಡಕ್ಕೆ ದೊಡ್ಡ ಹಿನ್ನಡೆ ತಂದಿದೆ. ಬೌಲಿಂಗ್ನಲ್ಲಿ ಭಾರತೀಯರನ್ನೇ ನಂಬಿರುವ ಲಖನೌಗೆ ಮಿಂಚಿನ ವೇಗಿ ಮಯಾಂಕ್ ಯಾದವ್ ಸೇರ್ಪಡೆ ಹೊಸ ಬಲ ತುಂಬಿದೆ.
ಪ್ಲೇಆಫ್ ಲೆಕ್ಕಾಚಾರ...
ಶ್ರೇಯಸ್ ಅಯ್ಯರ್ ಪಡೆ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 3 ಸೋಲಿನೊಂದಿಗೆ 13 ಅಂಕ ಗಳಿಸಿದೆ. ಮಳೆಯಿಂದಾಗಿ ಒಂದು ಪಂದ್ಯ ರದ್ದು ಆಗಿದ್ದು ಪಂಜಾಬ್ಗೆ ತುಸು ಹಿನ್ನಡೆ ತಂದಿದೆ. ಉಳಿದ 4ರಲ್ಲಿ 2ರಲ್ಲಿ ಗೆದ್ದರೆ 2ರಲ್ಲಿ ಗೆದ್ದರೂ ಪ್ಲೇಆಫ್ ಸ್ಥಾನ ಒಲಿಸಿಕೊಳ್ಳಬಹುದಾಗಿದೆ. ಮತ್ತೊಂದೆಡೆ ಲಖನೌ ತಂಡ ಆಡಿದ 10 ಪಂದ್ಯಗಳಲ್ಲಿ ತಲಾ 5 ಜಯ, 5 ಸೋಲು ಕಂಡಿದ್ದು, ಪ್ಲೇಆಫ್ಗೇರಲು ಉಳಿದ 4 ಪಂದ್ಯಗಳಲ್ಲಿ 3 ಗೆಲುವಿನ ಅನಿವಾರ್ಯತೆ ಎದುರಿಸುತ್ತಿದೆ.
ಧರ್ಮಶಾಲಾದಲ್ಲಿ ಮೊದಲ ಪಂದ್ಯ
ಒಟ್ಟು 12 ತಾಣಗಳ ಪೈಕಿ ಧರ್ಮಶಾಲಾ ಟೂರ್ನಿಗೆ ಕೊನೆಯದಾಗಿ ಎಂಟ್ರಿ ಕೊಡುತ್ತಿದ್ದು, ಟೂರ್ನಿಯ 54ನೇ ಪಂದ್ಯ ಇಲ್ಲಿನ ಮೊದಲ ಕಾದಾಟ ಆಗಿರಲಿದೆ. ತವರು ತಾಣ ಮುಲ್ಲನ್ಪುರದಲ್ಲಿ ಆಡಿದ 4 ಪಂದ್ಯಗಳಲ್ಲಿ ತಲಾ 2 ಜಯ, ಸೋಲು ಕಂಡಿರುವ ಪಂಜಾಬ್ ತಂಡ, ತನ್ನ ಕೊನೇ 3 ತವರು ಪಂದ್ಯಗಳನ್ನು ಧರ್ಮಶಾಲಾದ ಎಚ್ಪಿಸಿಎ ಸ್ಟೇಡಿಯಂನಲ್ಲಿ ಆಡಲಿದೆ. ಲಖನೌ, ಡೆಲ್ಲಿ (ಮೇ 8), ಮುಂಬೈ (ಮೇ 11) ವಿರುದ್ಧದ ಈ 3 ಪಂದ್ಯಗಳಲ್ಲಿ ಗೆದ್ದರೆ ಪಂಜಾಬ್, ಮೇ 16ರಂದು ಜೈಪುರದಲ್ಲಿ ನಡೆಯಲಿರುವ ತನ್ನ ಕೊನೇ ಲೀಗ್ ಪಂದ್ಯಕ್ಕೆ ಮುನ್ನವೇ ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಳ್ಳಬಹುದಾಗಿದೆ.
ಮುಖಾಮುಖಿ: 5
ಪಂಜಾಬ್: 2
ಲಖನೌ: 3
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.