ಸೋಲಿನ ನಡುವೆ ಬೌಲರ್​ಗಳ ಹೋರಾಟವನ್ನು ಮೆಚ್ಚಿದ ಪಂಜಾಬ್​ ಕಿಂಗ್ಸ್ ಹಂಗಾಮಿ ನಾಯಕ ಸ್ಯಾಮ್​ ಕರ್ರನ್​

web curran
Published on

ಮುಲ್ಲನ್​ಪುರ: ಬ್ಯಾಟಿಂಗ್​ ವೈಫಲ್ಯದಿಂದ ಸಾಧಾರಣ ಮೊತ್ತಕ್ಕೆ ತೃಪ್ತಿಪಟ್ಟರೂ, ಕೊನೇ ಓವರ್​ವರೆಗೂ ದಿಟ್ಟ ಹೋರಾಟ ನಡೆಸಲು ನೆರವಾದ ಬೌಲಿಂಗ್​ ಮತ್ತು ಫೀಲ್ಡಿಂಗ್​ ನಿರ್ವಹಣೆಯನ್ನು ಪಂಜಾಬ್​ ಕಿಂಗ್ಸ್​ ತಂಡದ ಹಂಗಾಮಿ ನಾಯಕ ಸ್ಯಾಮ್​ ಕರ್ರನ್​ ಮೆಚ್ಚಿದ್ದಾರೆ.

ರಾಜಸ್ಥಾನ ರಾಯಲ್ಸ್​ ವಿರುದ್ಧ 3 ವಿಕೆಟ್​ಗಳಿಂದ ವೀರೋಚಿತ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಸ್ಯಾಮ್​ ಕರ್ರನ್​, "ಪಿಚ್​ ನಿಧಾನಗತಿಯದ್ದಾಗಿತ್ತು. ಬ್ಯಾಟಿಂಗ್​ನಲ್ಲಿ ಉತ್ತಮ ಆರಂಭ ಸಿಗದಿದ್ದರೂ, ಉತ್ತಮವಾಗಿಯೇ ಇನಿಂಗ್ಸ್​ ಮುಗಿಸಿದೆವು. 150ರ ಸನಿಹದ ಮೊತ್ತ ಪೇರಿಸಿದ್ದರಿಂದ ನಿಕಟ ಹೋರಾಟ ತೋರುವ ವಿಶ್ವಾಸವಿತ್ತು. ಈ ನಿಕಟ ಪಂದ್ಯವನ್ನು ಗೆಲ್ಲದಿದ್ದರೂ, ಹಲವು ಸಕಾರಾತ್ಮಕ ಅಂಶಗಳು ಲಭಿಸಿವೆ. ಸೋಲಿನಿಂದ ಸ್ವಲ್ಪ ನಿರಾಸೆಯಾಗಿದ್ದರೂ, ಪುಟಿದೆದ್ದು ಬರುವ ವಿಶ್ವಾಸ ಮೂಡಿಸಿದೆ' ಎಂದು ಹೇಳಿದ್ದಾರೆ.

148 ರನ್​ ಸವಾಲಿಗೆ ಪ್ರತಿಯಾಗಿ ಯಶಸ್ವಿ ಜೈಸ್ವಾಲ್​ (39) ಮತ್ತು ತನುಷ್​ ಕೋಟ್ಯಾನ್​ (24) ರಾಯಲ್ಸ್​ಗೆ ಎಚ್ಚರಿಕೆಯ ಆರಂಭ ಒದಗಿಸಿದರು. ಬಳಿಕ ಸಂಜು ಸ್ಯಾಮ್ಸನ್​ (18), ರಿಯಾನ್​ ಪರಾಗ್​ (23), ಧ್ರುವ ಜುರೆಲ್​ ಹೆಚ್ಚು ಸಮಯ ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಇದರಿಂದ ರಾಯಲ್ಸ್​, ಕೊನೇ 16 ಎಸೆತಗಳಲ್ಲಿ 33 ರನ್​ ಗಳಿಸುವ ಒತ್ತಡಕ್ಕೆ ಸಿಲುಕಿತು. ಆಗ ಒಂದೆಡೆ ಭದ್ರವಾಗಿ ನಿಂತ ಶಿಮ್ರೊನ್​ ಹೆಟ್ಮೆಯರ್​ (27*ರನ್​, 10 ಎಸೆತ, 1 ಬೌಂಡರಿ, 3 ಸಿಕ್ಸರ್​) ಒಂದು ಎಸೆತ ಬಾಕಿ ಇರುವಂತೆಯೇ 7 ವಿಕೆಟ್​ ನಷ್ಟದಲ್ಲಿ ತಂಡವನ್ನು ಗುರಿ ಸೇರಿಸುವಲ್ಲಿ ಯಶಸ್ವಿಯಾದರು. ಕೊನೇ ಓವರ್​ನಲ್ಲಿ 10 ರನ್​ ಬೇಕಿದ್ದಾಗ ಅರ್ಷದೀಪ್​ ಎಸೆದ ಮೊದಲ 2 ಎಸೆತಗಳಲ್ಲಿ ರನ್​ ಗಳಿಸದಿದ್ದರೂ, ನಂತರ 3 ಎಸೆತಗಳಲ್ಲಿ 2 ಸಿಕ್ಸರ್​ ಸಿಡಿಸಿ ಹೆಟ್ಮೆಯರ್​ ಗೆಲುವು ತಂದರು.

ಕಳೆದ ಪಂದ್ಯದಲ್ಲಿ ನಾವು ಉತ್ತಮ ನಿರ್ವಹಣೆ ತೋರಿದರೂ ಸೋತೆವು. ಈ ಬಾರಿ ನಾವು ಅದಕ್ಕಿಂತ ಹೆಚ್ಚು ತಪು$್ಪಗಳನ್ನು ಮಾಡಿದರೂ ಗೆದ್ದೆವು. ಕ್ರಿಕೆಟ್​ ಒಂದು ತಮಾಷೆಯ ಆಟ. ಹೆಟ್ಮೆಯರ್​ ಕ್ರೀಸ್​ನಲ್ಲಿದ್ದ ಕಾರಣ ಗೆಲುವಿನ ವಿಶ್ವಾಸವಿತ್ತು ಎಂದು ರಾಯಲ್ಸ್​ ನಾಯಕ ಸಂಜು ಸ್ಯಾಮ್ಸನ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net