

ಪುಣೆ: ಹ್ಯಾಟ್ರಿಕ್ ಗೆಲುವಿನೊಂದಿಗೆ ಬೀಗುತ್ತಿರುವ ಆತಿಥೇಯ ಭಾರತ ತಂಡ ಏಕದಿನ ವಿಶ್ವಕಪ್ನಲ್ಲಿ ತನ್ನ ಗೆಲುವಿನ ಓಟವನ್ನು ಸತತ 4ನೇ ಪಂದ್ಯಕ್ಕೂ ವಿಸ್ತರಿಸಲು ಸಜ್ಜಾಗಿದೆ. ಎಂಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಶರ್ಮ ಬಳಗ, ಬಾಂಗ್ಲಾದೇಶದ ಸವಾಲು ಎದುರಿಸಲಿದ್ದು, ಬಲಿಷ್ಠ ನಿರ್ವಹಣೆಯನ್ನು ಮುಂದುವರಿಸುವ ಹಂಬಲದಲ್ಲಿದೆ. ಪಂದ್ಯದ ಪಿಚ್ ಮತ್ತು ಹವಾಮಾನ ವರದಿಯ ವಿವರ ಇಲ್ಲಿದೆ.
ಬ್ಯಾಟಿಂಗ್ ಸ್ನೇಹಿ ಪಿಚ್
ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ನ 5 ಪಂದ್ಯಗಳ ಪೈಕಿ ಇದು ಮೊದಲನೆಯದು. ಹೀಗಾಗಿ ಪಿಚ್ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಾಗಿದೆ. ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿರುವ ನಿರೀಕ್ಷೆ ಇದೆ. ಆದರೆ ಬೌಲರ್ಗಳೇ ನಿರ್ಣಾಯಕ ಪಾತ್ರ ನಿರ್ವಹಿಸಬೇಕಾಗಿದೆ. 2017ರಿಂದ ಇಲ್ಲಿ ನಡೆದಿರುವ 5 ಏಕದಿನಗಳಲ್ಲಿ 3ರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 300 ಪ್ಲಸ್ ಮೊತ್ತ ಪೇರಿಸಿದೆ.
ಕಾಡುವುದೇ ಮಳೆ?
ಏಷ್ಯಾಕಪ್-ಅಭ್ಯಾಸ ಪಂದ್ಯಗಳಿಗೆ ಮಳೆ ಅಡ್ಡಿ ಎದುರಿಸಿದ್ದ ಭಾರತ ವಿಶ್ವಕಪ್ನಲ್ಲಿ ಮೊದಲ 3 ಪಂದ್ಯಗಳನ್ನು ನಿರ್ವಿಘ್ನವಾಗಿ ಆಡಿತ್ತು. ಆದರೆ ಪುಣೆಯಲ್ಲಿ ಮಳೆ ಕಾಡುವ ಭೀತಿ ಇದೆ. ಬುಧವಾರ ಸಂಜೆ ಇಲ್ಲಿ ಸುರಿದ ಮಳೆಯಿಂದಾಗಿ ಭಾರತ ತಂಡ ಅರ್ಧಗಂಟೆ ಬೇಗನೆ ಅಭ್ಯಾಸ ಮುಗಿಸಿದರೆ, ಬಾಂಗ್ಲಾದ ಅಭ್ಯಾಸಕ್ಕೆ ಅಡಚಣೆ ಎದುರಾಯಿತು. ಮೈದಾನವನ್ನೂ ಸಂಪೂರ್ಣವಾಗಿ ಕವರ್ಗಳಿಂದ ಮುಚ್ಚಲಾಗಿತ್ತು. ಒಂದು ವೇಳೆ ಮಳೆ ಕಾಡಿದರೆ ಪಂದ್ಯಕ್ಕೆ ಮೀಸಲು ದಿನ ಇರುವುದಿಲ್ಲ. ಪಂದ್ಯ ರದ್ದಾದರೆ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಳ್ಳಲಿವೆ.