ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 17ನೇ ದ್ವಿಶತಕ ಸಿಡಿಸಿ ದಾಖಲೆ ಬರೆದ ಚೇತೇಶ್ವರ ಪೂಜಾರ

pujara web
Published on

ರಾಜ್​ಕೋಟ್​: ಅನುಭವಿ ಬ್ಯಾಟರ್​ ಚೇತೇಶ್ವರ ಪೂಜಾರ (243*ರನ್​, 356 ಎಸೆತ, 30 ಬೌಂಡರಿ) ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 17ನೇ ದ್ವಿಶತಕ ಸಿಡಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಅವರು ಜಾರ್ಖಂಡ್​ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ಪರ ಈ ಮೈಲಿಗಲ್ಲು ನೆಟ್ಟಿದ್ದಾರೆ.

ಪೂಜಾರ ಈಗ ವಿಶ್ವದಲ್ಲಿ ಗರಿಷ್ಠ ದ್ವಿಶತಕ ಸಿಡಿಸಿದ ಬ್ಯಾಟರ್​ಗಳಲ್ಲಿ ಇಂಗ್ಲೆಂಡ್​ನ ಮಾರ್ಕ್​ ರಾಮ್​ಪ್ರಕಾಶ್​ ಮತ್ತು ಹೆರ್​ರ್ಬಟ್​ ಸಟ್​ಕ್ಲ್​ಿ ಜತೆ ಜಂಟಿ 4ನೇ ಸ್ಥಾನ ಅಲಂಕರಿಸಿದ್ದಾರೆ. ಆಸ್ಟ್ರೆಲಿಯಾದ ಡಾನ್​ ಬ್ರಾಡ್ಮನ್​ ಗರಿಷ್ಠ 37 ದ್ವಿಶತಕ ಸಿಡಿಸಿದ ವಿಶ್ವದಾಖಲೆ ಹೊಂದಿದ್ದಾರೆ. ಇಂಗ್ಲೆಂಡ್​ನ ವಾಲಿ ಹ್ಯಾಮ್ಮಂಡ್​ 36 ದ್ವಿಶತಕದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಎಲಿಯಾಸ್​ ಹೆನ್ರಿ ಹೆಂಡ್ರೆನ್​ (22) 3ನೇ ಸ್ಥಾನದಲ್ಲಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್​ನ 61ನೇ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿಕೊಂಡಿರುವ 35 ವರ್ಷದ ಪೂಜಾರ (19,812), ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಗರಿಷ್ಠ ರನ್​ ಬಾರಿಸಿದ ಭಾರತೀಯ ಬ್ಯಾಟರ್​ಗಳಲ್ಲಿ ವಿವಿಎಸ್​ ಲಕ್ಷ್ಮಣ್​ (19,730) ಅವರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಿದ್ದಾರೆ. ಸುನೀಲ್​ ಗಾವಸ್ಕರ್​ (25,834), ಸಚಿನ್​ ತೆಂಡುಲ್ಕರ್​ (25,396) ಮತ್ತು ರಾಹುಲ್​ ದ್ರಾವಿಡ್​ (23,794) ಅಗ್ರ 3 ಸ್ಥಾನದಲ್ಲಿರುವ ಭಾರತೀಯರಾಗಿದ್ದಾರೆ.

ಪೂಜಾರ ದ್ವಿಶತಕದಾಟದಿಂದ ಸೌರಾಷ್ಟ್ರ ತಂಡ 4 ವಿಕೆಟ್​ಗೆ 578 ರನ್​ ಪೇರಿಸಿ ಡಿಕ್ಲೇರ್​ ಮಾಡಿಕೊಂಡಿತು. ಪ್ರೇರಕ್​ ಮಂಕಡ್​ (104*) ಶತಕ ಸಿಡಿಸಿ ಪೂಜಾರಗೆ ಉತ್ತಮ ಬೆಂಬಲ ಒದಗಿಸಿದರು. 436 ರನ್​ ಹಿನ್ನಡೆಯೊಂದಿಗೆ ದ್ವೀತಿಯ ಇನಿಂಗ್ಸ್​ ಆರಂಭಿಸಿದ ಜಾರ್ಖಂಡ್​ ದಿನದಂತ್ಯಕ್ಕೆ 2 ವಿಕೆಟ್​ಗೆ 140 ರನ್​ ಗಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net