ಭಾರತದ ಕ್ರಿಕೆಟಿಗ ಚೇತೇಶ್ವರ ಪೂಜಾರ ಬಳಿ ಕ್ಷಮೆಯಾಚಿಸಿದ ಕೌಂಟಿ ಕ್ರಿಕೆಟಿಗ

pujara and county cricketer for web
Published on

ಲಂಡನ್: ಕೌಂಟಿ ಪಂದ್ಯದ ವೇಳೆ ಭಾರತ ಟೆಸ್ಟ್ ತಂಡದ ಸದಸ್ಯ ಚೇತೇಶ್ವರ ಪೂಜಾರ ಅವರನ್ನು ನಿಂದಿಸಿ ಕ್ರಿಕೆಟ್ ವಲಯದಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದ ಸೋಮರ್‌ಸೆಟ್ ವೇಗಿ ಜಾಕ್ ಬ್ರೂಕ್ಸ್ ಕ್ಷಮೆಯಾಚಿಸಿದ್ದಾರೆ. ಪಂದ್ಯ ವೇಳೆ ಬ್ರೂಕ್ಸ್ ಪೂಜಾರ ಅವರನ್ನು ‘ಸ್ಟೀವ್’ ಎಂದು ಜರಿದಿದ್ದರು. ಚೇತೇಶ್ವರ್ ಪೂಜಾರ ಸೇರಿದಂತೆ ಹಲವು ವಿದೇಶಿ ಆಟಗಾರರನ್ನು ಹೆಸರನ್ನು ಉಚ್ಛರಿಸಲು ಸಾಧ್ಯವಾಗದೇ ‘ಸ್ಟೀವ್’ ಎಂಬ ಅಡ್ಡ ಹೆಸರಿನಲ್ಲಿ ಕರೆಯುವ ಮೂಲಕ ಸಾಂಸ್ಥಿಕ ವರ್ಣಭೇದ ನೀತಿ ಅನುಸರಿಸಲಾಗಿತ್ತು ಎಂದು ಯಾರ್ಕ್‌ಷೈರ್ ಕ್ಲಬ್‌ನ ಮಾಜಿ ನೌಕರ ಅಜೀಮ್ ರಫೀಕ್ ಆರೋಪಿಸಿದ್ದರು. ಘಟನೆ ನಡೆದು ಬರೋಬ್ಬರಿ ವರ್ಷದ ಬಳಿಕ ಸೋಮರ್‌ಸೆಟ್ ಆಟಗಾರ ಕ್ಷಮೆಯಾಚಿಸಿದ್ದಾರೆ. ಇದಕ್ಕೂ ಮೊದಲು ಚೇತೇಶ್ವರ ಪೂಜಾರ 2015 ಮತ್ತು 2018ರಲ್ಲಿ ಯಾರ್ಕ್‌ಷೈರ್ ಪರ ಆಡಿದ್ದರು.

2018ರಲ್ಲಿ ಸೋಮರ್‌ಸೆಟ್ ಸೇರ್ಪಡೆಗೊಂಡ ಬ್ರೂಕ್ಸ್, ಅಜೀಮ್ ರಫೀಕ್ ಗಮನಕ್ಕೆ ತಂದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ಷಮೆಯಾಚಿಸುವೆ. ಈ ಕುರಿತು ನನಗೆ ಬೇಸರವಿದೆ ಎಂದು ಹೇಳಿದ್ದಾರೆ. 2012ರಲ್ಲಿ ನಾನು ಮಾಡಿದ್ದ ಕೆಲವೊಂದು ಟ್ವೀಟ್‌ಗಳ ಬಗ್ಗೆ ವಿಷಾಯ ವ್ಯಕ್ತಪಡಿಸುವೆ ಎಂದಿದ್ದಾರೆ. ಜಾಕ್ ಬ್ರೂಕ್ಸ್ 2012ರಲ್ಲಿ ಬೇರೆ ಕ್ಲಬ್‌ನಲ್ಲಿದ್ದರು, ಈ ವೇಳೆ ಅವರು ಮಾಡಿದ್ದ ಟ್ವೀಟ್‌ಗೂ ಕ್ಷಮೆಯಾಚಿಸಿದ್ದಾರೆ ಎಂದು ಸೋಮರ್‌ಸೆಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಅಜೀಮ್ ರಫೀಕ್ ಆರೋಪದ ಬೆನ್ನಲ್ಲೇ ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಟಿನೊ ಬೆಸ್ಟ್ ಹಾಗೂ ಪಾಕಿಸ್ತಾನದ ರಾಣಾ ನವೀದ್ ಉಲ್ ಹಸನ್ ಕೂಡ ಧ್ವನಿ ಎತ್ತಿದ್ದರು. ಸ್ಥಳೀಯ ಟ್ಯಾಕ್ಸಿ ಚಾಲಕರು, ರೆಸ್ಟೋರೆಂಟ್‌ನ ನೌಕರರು, ಏಷ್ಯಾದ ಸಮೂಹಕ್ಕೆ ಇದೇ ಹೆಸರಿನಲ್ಲಿ ಕರೆಯುತ್ತಾರೆ. ಏಕೆಂದರೆ ಅವರಿಗೆ ಹೆಸರಿನ ಉಚ್ಛಾರಣೆ ಬರುವುದಿಲ್ಲ. ಇದಕ್ಕೆ ಪೂಜಾರ ಅವರು ಕೂಡ ಹೊರತಾಗಿರಲಿಲ್ಲ ಎಂದು ಏಷ್ಯಾ ಮೂಲದ ಮಾಜಿ ನೌಕಕರು ದೂರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net