

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವ ಕ್ರಿಕೆಟ್‌ನಲ್ಲೇ ಶ್ರೀಮಂತ ಲೀಗ್ ಎನಿಸಿಕೊಂಡಿದೆ. ಐಪಿಎಲ್ ಹುಟ್ಟುಕೊಂಡ ಬಳಿಕ ಭಾರತ ಸೇರಿದಂತೆ ಇತರ ದೇಶಗಳಲ್ಲೂ ಅದೆಷ್ಟೋ ಕ್ರೀಡಾಲೀಗ್‌ಗಳು ಹುಟ್ಟಿಕೊಂಡಿವೆ. 2016ರಿಂದ ಪಾಕಿಸ್ತಾದಲ್ಲೂ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಆಯೋಜಿಸಿಕೊಂಡು ಬರಲಾಗುತ್ತಿದೆ. ಆದರೆ, ಎರಡೂ ಲೀಗ್‌ಗಳ ಬಹುಮಾನ ಮೊತ್ತ ಅಜಗಜಾಂತರವಿದೆ. ಪಿಎಸ್‌ಎಲ್ ಟೂರ್ನಿಯ ಒಟ್ಟು ಬಹುಮಾನ ಮೊತ್ತವೇ ಐಪಿಎಲ್‌ನಲ್ಲಿ ಪ್ಲೇ-ಆಫ್ ಪ್ರವೇಶಿಸಿದ ತಂಡವೊಂದು ಪಡೆಯುವ ಬಹುಮಾನ ಮೊತ್ತಕ್ಕೂ ಕಡಿಮೆಯಿದೆ.
ಪಿಎಸ್‌ಎಲ್ ಜಯಿಸಿದ ಕರಾಚಿ ತಂಡ ಟ್ರೋಫಿ ಜತೆಗೆ 3.72 ಕೋಟಿ ರೂಪಾಯಿ ಗೆದ್ದುಕೊಂಡರೆ, ರನ್ನರ್‌ಅಪ್ ಸ್ಥಾನ ಪಡೆದ ತಂಡ ಲಾಹೋರ್ ಕ್ವಾಲ್ಯಾಂಡರ್ಸ್ 1.50 ಕೋಟಿ ಬಹುಮಾನ ಮೊತ್ತ ಪಡೆಯಿತು. ಪಿಎಸ್‌ಎಲ್‌ನ ಒಟ್ಟು ಬಹುಮಾನ ಮೊತ್ತವೇ 7.42 ಕೋಟಿ ರೂಪಾಯಿ. ಕಳೆದವಾರ ಮುಕ್ತಾಯಗೊಂಡ 13ನೇ ಐಪಿಎಲ್‌ನಲ್ಲಿ ವಿಜೇತರಾದ ಮುಂಬೈ ಇಂಡಿಯನ್ಸ್ ತಂಡ 20 ಕೋಟಿ ರೂಪಾಯಿ ಪಡೆಯಿತು. ಲೀಗ್ ಆರಂಭಕ್ಕೂ ಮುನ್ನ ಬಿಸಿಸಿಐ ವಿಜೇತರಿಗೆ 10 ಕೋಟಿ ರೂಪಾಯಿ ಎಂದು ಘೋಷಿಸಿದರೂ ಕಡೇ ಕ್ಷಣದಲ್ಲಿ ಬಹುಮಾನ ಮೊತ್ತ ಪರಿಷ್ಕರಿಸಿತು. 2ನೇ ಸ್ಥಾನ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ 12.50 ಕೋಟಿ ರೂಪಾಯಿ ಗೆದ್ದುಕೊಂಡಿತು. ಪ್ಲೇಆಫ್ ಹಂತಕ್ಕೇರಿದ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ತಲಾ 8.75 ಕೋಟಿ ರೂಪಾಯಿ ಪಡೆದುಕೊಂಡವು.
ಕಳೆದ ಮಾರ್ಚ್ ತಿಂಗಳಲ್ಲೇ 5ನೇ ಆವೃತ್ತಿಯ ಪಿಎಸ್‌ಎಲ್ ಲೀಗ್‌ಗಳು ಮುಕ್ತಾಯಗೊಂಡಿದ್ದರೂ ಕೋವಿಡ್-19 ಕಾರಣದಿಂದಾಗಿ ಪ್ಲೇಆಫ್ ಹಂತ ಮುಂಡೂದಲಾಗಿತ್ತು. ನವೆಂಬರ್ 14 ರಿಂದ 17 ರವರೆಗೆ ಪ್ಲೇಆಫ್ ಆಯೋಜಿಸಲಾಗಿತ್ತು.