ಅನಿಶ್ಚಿತತೆಯಲ್ಲಿ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ ವಿಳಂಬ, ನಿರೀಕ್ಷೆಯಂತೆಯೇ ಮತ್ತೊಂದು ಲೀಗ್​ಗೆ ಪೆಟ್ಟು

page 10 4
Published on

ಬೆಂಗಳೂರು: ಕರೊನಾ ವೈರಸ್ ಭೀತಿಯಿಂದಾಗಿ ಜಾಗತಿಕ ಕ್ರೀಡಾ ಕ್ಷೇತ್ರವೇ ನಲುಗಿ ಹೋಗಿದೆ. ಪ್ರತಿಷ್ಠಿತ ಅಂತಾರಾಷ್ಟ್ರೀಯ, ರಾಷ್ಟ್ರೀಯ ಕ್ರೀಡಾಕೂಟಗಳು ಮುಂದಕ್ಕೆ ಹೋಗಿರುವುದು ಹೊಸದೇನಲ್ಲ. ಇದೀಗ ವಿವಿಧ ಕ್ರೀಡಾ ಲೀಗ್​ಗಳಿಗೂ ಇದರ ಬಿಸಿ ತಟ್ಟಲಾರಂಭಿಸಿದೆ. ಕಳೆದ 6 ವರ್ಷಗಳಿಂದ ಕಬಡ್ಡಿ ಪ್ರೇಮಿಗಳನ್ನು ರಂಜಿಸುತ್ತಾ ಬಂದಿರುವ ಪ್ರೊ ಕಬಡ್ಡಿ ಲೀಗ್ ಮನರಂಜನೆ ಈ ಬಾರಿ ದಕ್ಕುವುದು ಬಹುತೇಕ ಅನುಮಾನವೆನಿಸಿದೆ. ಮೇ ತಿಂಗಳಲ್ಲಿ ಕರೊನಾ ವೈರಸ್ ಹತೋಟಿಗೆ ಬಂದರಷ್ಟೇ ಮುಂದಿನ ಜುಲೈ-ಆಗಸ್ಟ್ ತಿಂಗಳಲ್ಲಿ ನಿಗದಿಯಾಗಿರುವ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನಡೆಯಲಿದೆ. ಆದರೆ, ಹಾಲಿ ಪರಿಸ್ಥಿತಿಯಲ್ಲಿ ಪಿಕೆಎಲ್, ಆಟಗಾರರು ಹಾಗೂ ಅಭಿಮಾನಿಗಳ ಪಾಲಿಗೆ ಮರೀಚಿಕೆಯಾಗಿದೆ.

ಎಲ್ಲವೂ ಅಂದುಕೊಂಡಂತೆ ಸಾಗಿದ್ದರೆ ಈ ವೇಳೆಗೆ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಲಾಕ್​ಡೌನ್​ನಿಂದಾಗಿ ಇದರ ಯಾವ ಪ್ರಕ್ರಿಯೆಯೂ ಸಾಧ್ಯವಾಗಿಲ್ಲ. ಇದರಿಂದ ಮುಂಬರುವ ಪ್ರೊ ಕಬಡ್ಡಿ ಲೀಗ್ ಸಂಘಟಿಸುವುದು ಆಯೋಜಕರ ಪಾಲಿಗೆ ಕಷ್ಟಕರವಾಗಲಿದೆ.

ಈಗಾಗಲೇ 13ನೇ ಆವೃತ್ತಿಯ ಐಪಿಎಲ್ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದ್ದರೆ, ಟಿ20 ವಿಶ್ವಕಪ್ ಕೂಡ ಡೋಲಾಯಮಾನ ಸ್ಥಿತಿಯಲ್ಲಿದೆ. ಐಪಿಎಲ್, ಟಿ20 ವಿಶ್ವಕಪ್​ಗೆ ನೇರಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್ ಸಂದಿಗ್ಧ ಸ್ಥಿತಿಯಲ್ಲಿದೆ. ಇದೇ ಸಂಸ್ಥೆ ಪ್ರೊ ಕಬಡ್ಡಿ ಲೀಗ್ ನೇರಪ್ರಸಾರದ ಹಕ್ಕು ಕೂಡ ಹೊಂದಿರುವುದರಿಂದ, ಜನಪ್ರಿಯ ಮತ್ತು ಶ್ರೀಮಂತವಾದ ಕ್ರಿಕೆಟ್ ಟೂರ್ನಿಗಳತ್ತ ಹೆಚ್ಚಿನ ಆಸಕ್ತಿ ವಹಿಸಲಿದೆ. ಇದರಿಂದ ಕಬಡ್ಡಿ ಲೀಗ್ ಆಯೋಜನೆ ಹಿಂದೆ ಬೀಳುವ ಸಾಧ್ಯತೆ ಇದೆ. ಇದಲ್ಲದೆ ಕಬಡ್ಡಿ, ಸಂಪರ್ಕ ಕ್ರೀಡೆಯಾಗಿರುವುದರಿಂದ ಇದನ್ನು ಆಯೋಜಿಸುವಾಗ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾದ ಸವಾಲುಗಳು ಎದುರಾಗಲಿವೆ.

‘ಕಬಡ್ಡಿ ದೈಹಿಕ ಸ್ಪರ್ಶದ ಕ್ರೀಡೆಯಾಗಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಏನೂ ಹೇಳುವುದು ಕಷ್ಟ. ಕರೊನಾ ವೈರಸ್ ಭೀತಿ ಸಂಪೂರ್ಣ ಮಾಯವಾದರಷ್ಟೇ ಆಟಗಾರರು ಆಡಲು ಮಾನಸಿಕವಾಗಿ ಸಿದ್ಧರಾಗುತ್ತಾರೆ. ಈಗಾಗಲೇ ಸಬ್-ಜೂನಿಯರ್, ಫೆಡರೇಷನ್ ಕಪ್ ಕಬಡ್ಡಿ ಟೂರ್ನಿಗಳನ್ನು ಮುಂದೂಡಲಾಗಿದೆ. ಈ ತಿಂಗಳು ನಡೆಯಬೇಕಿದ್ದ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ ಕೂಡ ಮುಂದಕ್ಕೆ ಹೋಗಿದೆ’ ಎಂದು ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ತಂಡದ ಕೋಚ್ ಬಿಸಿ ರಮೇಶ್ ವಿಜಯವಾಣಿಗೆ ಪ್ರತಿಕ್ರಿಯಿಸಿದ್ದಾರೆ

ಸಂದಿಗ್ಧ ಸ್ಥಿತಿಯಲ್ಲಿ ಕ್ರೀಡಾ ಲೀಗ್​ಗಳು: 2008ರಲ್ಲಿ ಐಪಿಎಲ್ ಉದಯವಾಗುವುದ ರೊಂದಿಗೆ ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಲೀಗ್​ಗಳ ಪರ್ವವೇ ಆರಂಭಗೊಂಡಿತು. ಕೆಲ ಲೀಗ್​ಗಳು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದ್ದರೂ ಮತ್ತೆ ಕೆಲವು ಅರ್ಧಕ್ಕೆ ನಿಂತಿವೆ. ಆದರೆ, 2020 ಕ್ರೀಡಾ ಲೀಗ್​ಗಳ ಇನ್ನಷ್ಟು ಪಾಲಿಗೆ ದೊಡ್ಡ ಸವಾಲಾಗಿದೆ. ವರ್ಷದ ಆರಂಭದಲ್ಲೇ ನಡೆಯುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್, ಬಳಿಕ ಇಂಡಿಯನ್ ಸೂಪರ್ ಲೀಗ್ ಫುಟ್​ಬಾಲ್ ಟೂರ್ನಿಗಳು ಈಗಾಗಲೆ ಮುಕ್ತಾಯಗೊಂಡಿವೆ. ಅದರಲ್ಲೂ ಐಎಸ್​ಎಲ್ ಫೈನಲ್ ಪಂದ್ಯ ಪ್ರೇಕ್ಷಕರಿಲ್ಲದೆ ನಡೆಯಿತು. ಐ-ಲೀಗ್ ಫುಟ್​ಬಾಲ್ ಟೂರ್ನಿ ಮೊಟಕುಗೊಂಡಿತು. ಬಳಿಕ ನಡೆಯಬೇಕಿದ್ದ ಐಪಿಎಲ್, ಮುಂದೆ ಪಿಕೆಎಲ್, ಪ್ರೊ ವಾಲಿಬಾಲ್ ಲೀಗ್, ಅಲ್ಟಿಮೇಟ್ ಟೇಬಲ್ ಟೆನಿಸ್ ಲೀಗ್, ಪ್ರೊ ಕುಸ್ತಿ ಲೀಗ್ ಜತೆಗೆ ಕೆಲ ರಾಜ್ಯಗಳ ಕ್ರೀಡಾ ಲೀಗ್​ಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

ಕುಸ್ತಿ, ಕಬಡ್ಡಿ, ಖೋಖೋ ಕ್ರೀಡೆಗಳಿಗೆ ಸಂಕಷ್ಟ: ಕರೊನಾ ವೈರಸ್ ಬಿಕ್ಕಟ್ಟಿನಿಂದ ಪಾರಾಗಿ ಕ್ರೀಡೆಗಳು ಪುನರಾರಂಭಗೊಂಡರೂ ದೈಹಿಕ ಸ್ಪರ್ಶ ಹೊಂದಿರುವ ಕುಸ್ತಿ, ಕಬಡ್ಡಿ, ಬಾಕ್ಸಿಂಗ್, ಖೋಖೋ ಆಟವನ್ನು ಆರಂಭಿಸುವುದು ಅಷ್ಟು ಸುಲಭದ ಕೆಲಸವಲ್ಲ. ಪ್ರೇಕ್ಷಕರಿಲ್ಲದೆ ಕ್ರಿಕೆಟ್, ಫುಟ್​ಬಾಲ್, ಹಾಕಿ, ಅಥ್ಲೆಟಿಕ್ಸ್​ನಂಥ ಕ್ರೀಡೆಗಳನ್ನು ಆಯೋಜಿಸಬಹುದು ಎಂದೆಲ್ಲಾ ಚರ್ಚೆಗಳು ನಡೆಯುತ್ತಿವೆ. ಆದರೆ ದೈಹಿಕ ಸ್ಪರ್ಶ ಅಗತ್ಯವಾಗಿರುವ ಕ್ರೀಡೆಗಳನ್ನು ಸಂಘಟಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಕ್ರೀಡಾಪಟುಗಳು ಮಾನಸಿಕವಾಗಿ ಇದಕ್ಕೆ ಸಿದ್ಧರಿರಬೇಕಾಗುತ್ತದೆ. ಕನಿಷ್ಠ ಮಾತನಾಡಿ, ಕೈಕುಲುಕಿದರೂ ಸೋಂಕು ಹರಡುವುದರಿಂದ, ಕರೋನಾ ಮಹಾಮಾರಿಯ ಭಯ ಇದ್ದೇ ಇರುತ್ತದೆ.

| ರಘುನಾಥ್ ಡಿ.ಪಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net