ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ ಮುಂದಿನ ವರ್ಷಕ್ಕೆ ಮುಂದೂಡಿಕೆ

plk web
Published on

ನವದೆಹಲಿ: ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಬೆನ್ನಲ್ಲೇ ಕರೊನಾ ವೈರಸ್ ಹಾವಳಿಯಿಂದಾಗಿ ದೇಶದ ಮತ್ತೊಂದು ಪ್ರತಿಷ್ಠಿತ ಕ್ರೀಡಾಲೀಗ್ ಮುಂದೂಡಿಕೆಯಾಗಿದೆ. ಈ ವರ್ಷ ನಡೆಯಬೇಕಿದ್ದ 8ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಟೂರ್ನಿಯನ್ನು ಕರೊನಾ ಹಾವಳಿಯಿಂದಾಗಿ ಮುಂದಿನ ವರ್ಷಕ್ಕೆ ಶನಿವಾರ ಅಧಿಕೃತವಾಗಿ ಮುಂದೂಡಲಾಗಿದೆ.

‘ಹಾಲಿ ಪರಿಸ್ಥಿತಿ, ಸರ್ಕಾರದ ಮಾರ್ಗಸೂಚಿಗಳನ್ನು ಗಮನಿಸಿ ಹಾಗೂ ಆಟಗಾರರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಪ್ರೊ ಕಬಡ್ಡಿ ಲೀಗ್ ಟೂರ್ನಿಯನ್ನು ಮುಂದೂಡಿಕೆ ಮಾಡಲಾಗುತ್ತಿದೆ. ಟೂರ್ನಿ ನಡೆಸಲು ಸುರಕ್ಷಿತ ವಾತಾವರಣ ನಿರ್ಮಾಣವಾದಾಗ ಮುಂದಿನ ವರ್ಷ ಟೂರ್ನಿಯನ್ನು ಆಯೋಜಿಸಲಾಗುವುದು’ ಎಂದು ಪ್ರೊ ಕಬಡ್ಡಿ ಲೀಗ್ ಸಂಘಟಕರು ತಿಳಿಸಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ನಿಗದಿಯಾಗಿದ್ದ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯನ್ನು ಈ ಮುನ್ನ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಮೂಲ ವೇಳಾಪಟ್ಟಿಯ ಪ್ರಕಾರ ಈ ವರ್ಷ ಜುಲೈನಿಂದ ಅಕ್ಟೋಬರ್ ನಡುವೆ ಟೂರ್ನಿ ನಡೆಯಬೇಕಾಗಿತ್ತು. ಇದಲ್ಲದೆ ಟೂರ್ನಿ ಆಯೋಜನೆಗೆ ಶ್ರೀಲಂಕಾದಿಂದಲೂ ಆಹ್ವಾನ ಬಂದಿತ್ತು. ಆದರೆ ಸಂಘಟಕರು, ಟೂರ್ನಿ ಆಯೋಜಿಸುವುದಿದ್ದರೆ ಅದು ಭಾರತದಲ್ಲಿ ಮಾತ್ರ ಎಂದು ಸ್ಪಷ್ಟಪಡಿಸಿದ್ದರು.

ಪ್ರೊ ಕಬಡ್ಡಿ ಲೀಗ್ ಭಾರತದಲ್ಲಿ ಐಪಿಎಲ್ ಮತ್ತು ಐಎಸ್‌ಎಲ್ ಬಳಿಕ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ಕ್ರೀಡಾಲೀಗ್ ಆಗಿದೆ. ಗ್ರಾಮೀಣ ಕ್ರೀಡೆ ಕಬಡ್ಡಿ ಆಟಗಾರರಿಗೆ ಆರ್ಥಿಕವಾಗಿ ಮತ್ತು ಅವಕಾಶದ ದೃಷ್ಟಿಯಿಂದ ಅತ್ಯುತ್ತಮ ವೇದಿಕೆಯೂ ಆಗಿದೆ. ಆದರೆ ಕರೊನಾ ಕಾಲದಲ್ಲಿ ಕಬಡ್ಡಿಯಂಥ ಸಂಪರ್ಕ ಕ್ರೀಡೆಯನ್ನು ಆಯೋಜಿಸುವುದು ಕಷ್ಟಕರ ಎಂದು ಸಂಘಟಕರು ಹಿಂಜರಿದ್ದಾರೆ. 2019ರ ಜುಲೈ-ಅಕ್ಟೋಬರ್‌ನಲ್ಲಿ ನಡೆದಿದ್ದ ಕಳೆದ ಆವೃತ್ತಿಯ 12 ತಂಡಗಳ ಲೀಗ್‌ನಲ್ಲಿ ಬೆಂಗಾಲ್ ವಾರಿಯರ್ಸ್‌ ತಂಡ ಚಾಂಪಿಯನ್ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net