

ಹೈದರಾಬಾದ್: ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯಲ್ಲಿ ಸೋಲಿನ ಆರಂಭ ಕಂಡಿದೆ. ಶುಕ್ರವಾರ ಆರಂಭಗೊಂಡ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 29-37 ಅಂಕಗಳಿಂದ ತೆಲುಗು ಟೈಟಾನ್ಸ್ ಎದುರು ನಿರಾಸೆ ಅನುಭವಿಸಿತು.
ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಟಾರ್ ರೈಡರ್ಗಳಾದ ಪ್ರದಿಪ್ ನರ್ವಾಲ್ ಹಾಗೂ ಪವನ್ ಸೆಹ್ರಾವತ್ ಸಾರಥ್ಯದ ತಂಡಗಳ ನಡುವಿನ ಕಾದಾಟದ ಆರಂಭದಲ್ಲಿ ಸಮಬಲದ ಹೋರಾಟ ನಡೆಯಿತು. 10 ನಿಮಿಷಗಳ ಬಳಿಕ ಆಲೌಟ್ ಬಲೆಗೆ ಸಿಲುಕಿದ ಬುಲ್ಸ್ ಹಿನ್ನಡೆ ಎದುರಿಸಿತು. ಮೊದಲಾರ್ಧದಲ್ಲಿ ತೆಲುಗು ಟೈಟಾನ್ಸ್ ತಂಡ 20-11 ರಿಂದ ಮೇಲುಗೈ ಸಾಧಿಸಿತು. ದ್ವೀತಿಯಾರ್ಧದಲ್ಲಿ ತೆಲುಗು ಟೈಟಾನ್ಸ್ ತಂಡವನ್ನು ಆಲೌಟ್ ಮಾಡಿ ಹಿನ್ನಡೆ ತಗ್ಗಿಸಿಕೊಂಡ ಬುಲ್ಸ್, ನಂತರ ಲಯ ತಪ್ಪಿತು. ಪವನ್ ಸೆಹ್ರಾವತ್ 13 ಅಂಕಗಳಿಸಿ ಮಿಂಚಿದರೆ, ಬುಲ್ಸ್ ಪರ ಡಿಫೆಂಡರ್ ಸುರೀಂದರ್ 5 ಅಂಕ ಕಲೆಹಾಕಿದ್ದು ಗರಿಷ್ಠ ಎನಿಸಿತು. ಬುಲ್ಸ್ ನಾಯಕ ಪ್ರದೀಪ್ ನರ್ವಾಲ್ 3 ಅಂಕಕ್ಕೆ ಸಮಾಧಾನ ಕಂಡರು.
ದಿನದ 2ನೇ ಪಂದ್ಯದಲ್ಲಿ ದಬಂಗ್ ಡೆಲ್ಲಿ ತಂಡ 36-28ರಿಂದ ಯು ಮುಂಬಾ ವಿರುದ್ಧ ಜಯ ದಾಖಲಿಸಿತು.
ಇಂದಿನ ಪಂದ್ಯಗಳು
ತೆಲುಗು ಟೈಟಾನ್ಸ್-ತಮಿಳ್ ತಲೈವಾಸ್
ಪುಣೇರಿ ಪಲ್ಟಾನ್&ಹರಿಯಾಣ ಸ್ಟೀಲರ್ಸ್
ಆರಂಭ: ರಾತ್ರಿ 8
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್