

ವಿಶಾಖಪಟ್ಟಣ: ಆಲ್ರೌಂಡ್ ನಿರ್ವಹಣೆ ತೋರಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ 4ನೇ ಪಂದ್ಯದಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಇರಾನ್ ಆಟಗಾರ ಅಲಿರೆಜಾ ಮಿರ್ಜೈನ್ (10) ಭರ್ಜರಿ ರೈಡಿಂಗ್ ಬಲದಿಂದ ಬೆಂಗಳೂರು ಬುಲ್ಸ್ ತಂಡ ಶನಿವಾರ ನಡೆದ ಕಾದಾಟದಲ್ಲಿ ಪಟನಾ ಪೈರೇಟ್ಸ್ ಎದುರು 38-30 ಅಂಕಗಳಿಂದ ಗೆಲುವು ಸಾಧಿಸಿತು.
ವಿಶ್ವಾನಂದ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ದಿನದ ಮೊದಲ ಪಂದ್ಯದಲ್ಲಿ ಯೋಗೇಶ್ ನಾಯಕತ್ವದಲ್ಲಿ ಕಣಕ್ಕಿಳಿದ ಬುಲ್ಸ್, ಮೊದಲಾರ್ಧದಲ್ಲಿ 18-15ರಿಂದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಪಟನಾ ಪ್ರತಿರೋಧ ತೋರಿದರೂ, ಬುಲ್ಸ್ ಮೇಲುಗೈ ಕಾಯ್ದುಕೊಂಡಿತು.
ಆಶಿಶ್ ಮಲಿಕ್ (8) ಕೂಡ ರೈಡಿಂಗ್ನಲ್ಲಿ ಮಿಂಚಿದರೆ, ಡಿಫೆಂಡಿಂಗ್ನಲ್ಲಿ ದೀಪಕ್ ಶಂಕರ್ (4), ಯೋಗೇಶ್ (3) ಗಮನಸೆಳೆದರು. ಪಟನಾ ಪರ ಅಯನ್ (10), ಸುಧಾಕರ್ (6) ಹೋರಾಟ ವ್ಯರ್ಥಗೊಂಡಿತು. ಬುಲ್ಸ್ ಮೊದಲ 3 ಪಂದ್ಯಗಳಲ್ಲಿ ಸೋತಿದ್ದರೆ, ಪಟನಾಗೆ ಇದು ಹ್ಯಾಟ್ರಿಕ್ ಸೋಲಾಗಿದೆ.