

ಹ್ಯಾಮಿಲ್ಟನ್: ಮೊಹಮದ್ ಶಮಿ (17ಕ್ಕೆ 3) ಸೇರಿದಂತೆ ವೇಗಿಗಳ ಮಾರಕ ದಾಳಿ ನೆರವಿನಿಂದ ಭಾರತ ತಂಡ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ಇಲೆವೆನ್ ಎದುರು 28 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆ ಸಂಪಾದಿಸಿತು. ಏಕದಿನ ಸರಣಿಯಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಭಾರತದ ಬೌಲರ್ಗಳು ಟೆಸ್ಟ್ ಕ್ರಿಕೆಟ್ನಲ್ಲಿ ತಿರುಗೇಟು ನೀಡುವ ಎಚ್ಚರಿಕೆ ರವಾನಿಸಿದರು.
ಭಾರತ ತಂಡ ಮೊದಲ ದಿನದಾಟದಲ್ಲಿ 263 ರನ್ಗಳಿಸಿತ್ತು. ಪ್ರತಿಯಾಗಿ ನ್ಯೂಜಿಲೆಂಡ್ ಇಲೆವೆನ್ ತಂಡ 2ನೇ ದಿನದಾಟದಲ್ಲಿ 235 ರನ್ಗಳಿಗೆ ಸರ್ವಪತನ ಕಂಡಿತು. ವೇಗಿಗಳಾದ ಶಮಿ, ಜಸ್ಪ್ರೀತ್ ಬುಮ್ರಾ (18ಕ್ಕೆ 2), ಉಮೇಶ್ ಯಾದವ್ (49ಕ್ಕೆ 2) ಹಾಗೂ ನವದೀಪ್ ಸೈನಿ (58ಕ್ಕೆ 2) ಒಳಗೊಂಡ ವೇಗದ ಬೌಲಿಂಗ್ ಪಡೆ ಆತಿಥೇಯ ತಂಡಕ್ಕೆ ಕಡಿವಾಣ ಹಾಕಿತು. ಕಿವೀಸ್ ಪರ ಹೆನ್ರಿ ಕೂಪರ್ (40 ರನ್, 68 ಎಸೆತ, 6 ಬೌಂಡರಿ) ಅಧಿಕ ರನ್ ಪೇರಿಸಿದರು.
ದಿನದ ಕೊನೇ ಅವಧಿಯಲ್ಲಿ 2ನೇ ಸರದಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ, ವಿಕೆಟ್ ನಷ್ಟವಿಲ್ಲದೆ 59 ರನ್ ಪೇರಿಸಿದ್ದು, ಒಟ್ಟಾರೆ 97 ರನ್ ಮುನ್ನಡೆಯಲ್ಲಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ (23) ಹಾಗೂ ಪೃಥ್ವಿ ಷಾ (35) ಜೋಡಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಭಾರತ: 263 ಮತ್ತು ವಿಕೆಟ್ ನಷ್ಟವಿಲ್ಲದೆ 59 (ಮಯಾಂಕ್ 23*, ಪೃಥ್ವಿ ಷಾ 35*). ನ್ಯೂಜಿಲೆಂಡ್ ಇಲೆವೆನ್: 235 (ಹೆನ್ರಿ ಕೂಪರ್ 40, ದಾರ್ಲೆ ಮಿಚೆಲ್ 32, ಶಮಿ 17ಕ್ಕೆ 3, ಜಸ್ಪ್ರೀತ್ ಬುಮ್ರಾ 18ಕ್ಕೆ 2, ಉಮೇಶ್ ಯಾದವ್ 49ಕ್ಕೆ 2, ನವದೀಪ್ ಸೈನಿ 58ಕ್ಕೆ 2).
ಇಶಾಂತ್ ಫಿಟ್ನೆಸ್ ಟೆಸ್ಟ್ ಪಾಸ್
ಕಳೆದ ತಿಂಗಳು ರಣಜಿ ಪಂದ್ಯದ ವೇಳೆ ಗಾಯಗೊಂಡಿದ್ದ ವೇಗಿ ಇಶಾಂತ್ ಶರ್ಮ ನ್ಯೂಜಿಲೆಂಡ್ ಪ್ರವಾಸದ ಟೆಸ್ಟ್ ಸರಣಿಗೆ ಫಿಟ್ ಆಗಿದ್ದಾರೆ. ಬೆಂಗಳೂರಿನ ಎನ್ಸಿಎಯಲ್ಲಿ ಶನಿವಾರ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇಶಾಂತ್ ಕಿವೀಸ್ಗೆ ಪ್ರಯಾಣಿಸಲಿದ್ದು, ಮೊದಲ ಟೆಸ್ಟ್ಗೆ ಮುನ್ನ ತಂಡವನ್ನು ಕೂಡಿಕೊಳ್ಳಲಿದ್ದಾರೆ.