

ನವದೆಹಲಿ: ಆಶ್ಚರ್ಯಕರವಾಗಿ ಕೋಚ್ ಹುದ್ದೆಯಿಂದ ಹೊರಬಿದ್ದಿರುವ ಡಬ್ಲ್ಯುವಿ ರಾಮನ್, ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ವಪ್ರತಿಷ್ಠೆಯ ಸಂಸ್ಕೃತಿ ಇದ್ದು, ಅದನ್ನು ಬದಲಾಯಿಸಬೇಕಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಎನ್‌ಸಿಎ ಅಧ್ಯಕ್ಷ ರಾಹುಲ್ ದ್ರಾವಿಡ್ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ದೇಶದ ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಬೇಕಾದ ರೂಪುರೇಷೆಗಳನ್ನು ಸಲ್ಲಿಸಲು ಸಿದ್ಧ ಎಂದೂ ಹೇಳಿದ್ದಾರೆ.
‘ಉಳಿದೆಲ್ಲರಿಗಿಂತಲೂ ತಂಡವೇ ಮುಖ್ಯವಾದುದು ಎಂಬುದು ರಾಮನ್ ನಂಬಿಕೆ. ಆದರೆ ತಂಡದಲ್ಲಿರುವ ಸ್ವಪ್ರತಿಷ್ಠೆ ಅವರ ಕೆಲಸಕ್ಕೆ ಅಡ್ಡಿಯಾಗಿತ್ತು’ ಎಂದು ಮೂಲಗಳು ತಿಳಿಸಿವೆ. ಆದರೆ ರಾಮನ್ ಪತ್ರದಲ್ಲಿ ಯಾರದೇ ಹೆಸರು ಉಲ್ಲೇಖಿಸಿಲ್ಲ.
ರಾಹುಲ್ ದ್ರಾವಿಡ್ ಮಹಿಳಾ ಕ್ರಿಕೆಟ್ ಅಭಿವೃದ್ಧಿಗೂ ಶ್ರಮಿಸಬಹುದು ಎಂಬ ಕಾರಣದಿಂದಾಗಿ ಗಂಗೂಲಿಗೆ ಬರೆದಿರುವ ಪತ್ರದ ಪ್ರತಿಯನ್ನು ಅವರಿಗೂ ರಾಮನ್ ಕಳುಹಿಸಿದ್ದಾರೆ ಎನ್ನಲಾಗಿದೆ. ಮಹಿಳಾ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಕೋಚ್‌ಗಳ ನಿರ್ಗಮನಕ್ಕೆ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಸಹಿತ ತಂಡದ ಕೆಲ ಆಟಗಾರ್ತಿಯರ ಜತೆಗಿನ ಭಿನ್ನಮತವೇ ಪ್ರಮುಖ ಕಾರಣವಾಗಿ ಕಾಣಿಸಿದೆ. ಕೆಲ ಕೋಚ್‌ಗಳು ತಾವಾಗಿಯೇ ನಿರ್ಗಮಿಸಿದ್ದರೆ, ಇತರರು ವಜಾಗೊಂಡಿದ್ದಾರೆ ಎಂದ ಹೇಳಲಾಗಿದೆ.