

ನಾರ್ತ್‌ಸೌಂಡ್: ವೇಗಿ ಪ್ಯಾಟ್ ಕಮ್ಮಿನ್ಸ್ (29ಕ್ಕೆ 3) ಚೊಚ್ಚಲ ಹ್ಯಾಟ್ರಿಕ್ ಹಾಗೂ ಅನುಭವಿ ಬ್ಯಾಟರ್ ಡೇವಿಡ್ ವಾರ್ನರ್ (53* ರನ್, 35 ಎಸೆತ, 5 ಬೌಂಡರಿ, 3 ಸಿಕ್ಸರ್) ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮಳೆಬಾಧಿತ ಪಂದ್ಯದಲ್ಲಿ ಡಕ್ವರ್ತ್-ಲೂಯಿಸ್-ಸ್ಟರ್ನ್ ನಿಯಮದ ಅನ್ವಯ ಬಾಂಗ್ಲಾದೇಶ ಎದುರು ಸೂಪರ್-8 ಹಂತದಲ್ಲಿ 28 ರನ್‌ಗಳ ಗೆಲುವು ದಾಖಲಿಸಿದೆ.
ವಿವ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾದೇಶ, ನಾಯಕ ನಜ್ಮೂಲ್ ಹೊಸೈನ್ ಶಾಂಟೋ (41) ಹಾಗೂ ತೌಹಿದ್ ಹೃದೋಯ್ (40) ಆಸರೆಯಲ್ಲಿ 8 ವಿಕೆಟ್‌ಗೆ 140 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಚೇಸಿಂಗ್‌ನಲ್ಲಿ ಆಸೀಸ್ ವಿಕೆಟ್ ನಷ್ಟವಿಲ್ಲದೆ 64 ರನ್‌ಗಳಿಸಿದಾಗ ಪಂದ್ಯಕ್ಕೆ ಮೊದಲ ಬಾರಿ ಮಳೆ ಅಡ್ಡಿಪಡಿಸಿತು. 15 ನಿಮಿಷ ಬಳಿಕ ಓವರ್ ಕಡಿತವಿಲ್ಲದೆ ಪಂದ್ಯ ಆರಂಭಗೊಳಿಸಲಾಯಿತು. 11.2 ಓವರ್‌ಗಳಲ್ಲಿ 2 ವಿಕೆಟ್‌ಗೆ 100 ರನ್‌ಗಳಿಸಿದಾಗ ಮತ್ತೆ ಸುರಿದ ಭಾರಿ ಮಳೆಯಿಂದಾಗಿ ಆಟ ಮುಂದುವರಿಸಲು ಸಾಧ್ಯವಾಗಲಿಲ್ಲ. ಆಗ ಡಕ್ವರ್ತ್ ನಿಯಮದನ್ವಯ ಆಸೀಸ್ ಜಯ ಸಾಧಿಸಿತು. ಡಿಎಲ್‌ಎಸ್ ಪ್ರಕಾರ ಆಸ್ಟ್ರೇಲಿಯಾ 72 ರನ್‌ಗಳಿಸಬೇಕಿತ್ತು.
ಬಾಂಗ್ಲಾದೇಶ: 8 ವಿಕೆಟ್‌ಗೆ 140 (ಲಿಟನ್ ದಾಸ್ 16, ನಜ್ಮೂಲ್ 41, ತೌಹಿದ್ 40, ಶಕೀಬ್ 8, ಟಸ್ಕಿನ್ 13, ಪ್ಯಾಟ್ ಕಮ್ಮಿನ್ಸ್ 29ಕ್ಕೆ 3, ಜಂಪಾ 24ಕ್ಕೆ 2). ಆಸ್ಟ್ರೇಲಿಯಾ: 11.2 ಓವರ್‌ಗಳಲ್ಲಿ 2 ವಿಕೆಟ್‌ಗೆ 100 (ವಾರ್ನರ್ 53*, ಟ್ರಾವಿಸ್ ಹೆಡ್ 31, ಮಿಚೆಲ್ ಮಾರ್ಷ್ 1, ಮ್ಯಾಕ್ಸ್‌ವೆಲ್ 14*, ರಿಷಾದ್ 23ಕ್ಕೆ 2).
ಪಂದ್ಯಶ್ರೇಷ್ಠ: ಪ್ಯಾಟ್ ಕಮ್ಮಿನ್ಸ್.
ಕಮ್ಮಿನ್ಸ್ ಚೊಚ್ಚಲ ಹ್ಯಾಟ್ರಿಕ್: ಆಸೀಸ್‌ನ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಹಾಲಿ ಟೂರ್ನಿಯಲ್ಲಿ ಚೊಚ್ಚಲ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು. ಬಾಂಗ್ಲಾದೇಶ 122 ರನ್‌ಗಳಿಸಿದಾಗ 18ನೇ ಓವರ್ ಎಸೆದ ಕಮ್ಮಿನ್ಸ್, 5 ಹಾಗೂ 6ನೇ ಎಸೆತದಲ್ಲಿ ಕ್ರಮವಾಗಿ ಮಹಮುದುಲ್ಲಾ (2),ಮಹಿದಿ ಹಸನ್ (0) ವಿಕೆಟ್ ಪಡೆದರು. 20ನೇ ಓವರ್‌ನ ಮೊದಲ ಎಸೆತದಲ್ಲಿ ತೌಹಿದ್ ಹೃದೊಯ್ (40) ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು.
2. ಪ್ಯಾಟ್ ಕಮ್ಮಿನ್ಸ್ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಆಸ್ಟ್ರೇಲಿಯಾದ 2ನೇ ಹಾಗೂ ಒಟ್ಟಾರೆ 7ನೇ ಬೌಲರ್ ಎನಿಸಿದರು. ಬ್ರೆಟ್ ಲೀ (2007), ಕರ್ಟಿಸ್ ಕ್ಯಾಂರ್ (2021), ವಾನಿಂದು ಹಸರಂಗ (2021), ಕಗಿಸೋ ರಬಾಡ (2021), ಕಾರ್ತಿಕ್ ಮೇಯಪ್ಪನ್ (2022), ಜೋಶ್ ಲಿಟಲ್ (2022) ಹಿಂದಿನ ಸಾಧಕರು.
4: ಪ್ಯಾಟ್ ಕಮ್ಮಿನ್ಸ್ ಟಿ20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಪಡೆದ ಆಸೀಸ್‌ನ 4ನೇ ಬೌಲರ್. ಬ್ರೆಟ್ ಲೀ (2007), ಆಶ್ಟನ್ ಆಗರ್ (2020), ನಥಾನ್ ಎಲ್ಲಿಸ್ (2021) ಮೊದಲ ಮೂವರು.
1. ಮಿಚೆಲ್ ಸ್ಟಾರ್ಕ್ (95) ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಗರಿಷ್ಠ ವಿಕೆಟ್ ಪಡೆದ ಲಸಿತ್ ಮಲಿಂಗ (94) ದಾಖಲೆ ಮುರಿದರು. ಶಕೀಬ್ ಅಲ್ ಹಸನ್ (92) ನಂತರದಲ್ಲಿದ್ದಾರೆ.
8. ಆಸ್ಟ್ರೇಲಿಯಾ (2022-2024) ಟಿ20 ವಿಶ್ವಕಪ್‌ನಲ್ಲಿ ಸತತವಾಗಿ ಗರಿಷ್ಠ ಪಂದ್ಯ ಗೆದ್ದ ತಂಡವೆನಿಸಿತು. ಇಂಗ್ಲೆಂಡ್ (2010-2012), ಭಾರತ (2012-2014) ನಂತರದಲ್ಲಿವೆ.