

ಶಾರ್ಜಾ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹಲವು ಸ್ಟಾರ್ ಆಟಗಾರರನ್ನು ಹೊಂದಿದ್ದರೂ, ಐಪಿಎಲ್-13ರ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ತಂಡ ಕೆಲವು ರೋಚಕ ಪಂದ್ಯಗಳನ್ನು ಸೋತಿರುವುದು ಇದಕ್ಕೆ ಕಾರಣ. ಗುರುವಾರ ಆರ್ಸಿಬಿ ವಿರುದ್ಧವೂ ಸುಲಭ ಗೆಲುವಿನತ್ತ ಸಾಗುತ್ತಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸ್ಲಾಗ್ ಓವರ್ಗಳ ಎಡವಟ್ಟಿನಿಂದ ಮತ್ತೊಮ್ಮೆ ಪಂದ್ಯ ಕೈಚೆಲ್ಲುವ ಆತಂಕ ಎದುರಿಸಿತ್ತು. ಈ ಕಾರಣದಿಂದಾಗಿ ತಂಡದ ಒಡತಿ ಹಾಗೂ ಬಾಲಿವುಡ್ ನಟಿ ಪ್ರೀತಿ ಝಿಂಟಾ ಅವರೇ ತಮ್ಮ ತಂಡದ ಕಾಲೆಳೆದಿದ್ದಾರೆ.
ದುರ್ಬಲ ಹೃದಯ ಹೊಂದಿರುವವರು ಖಂಡಿತವಾಗಿಯೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಂದ್ಯಗಳನ್ನು ನೋಡಬೇಡಿ ಎಂದು ಅವರು ತಮಾಷೆಯಾಗಿಯೇ ಎಚ್ಚರಿಕೆ ನೀಡಿದ್ದಾರೆ. ಅಂತಿಮ ಓವರ್ನಲ್ಲಿ ಕೇವಲ 2 ರನ್ಗಳಷ್ಟೇ ಬೇಕಿದ್ದರೂ, ಪಂಜಾಬ್ ತಂಡ ಕೊನೇ ಎಸೆತದವರೆಗೂ ಪಂದ್ಯವನ್ನು ಎಳೆದಿತ್ತು. ಕೊನೇ ಎಸೆತದಲ್ಲಿ ನಿಕೋಲಸ್ ಪೂರನ್ ಸಿಕ್ಸರ್ ಸಿಡಿಸದಿದ್ದರೆ ಅಥವಾ ಅವರು ಹೊಡೆದ ಚೆಂಡು ಕ್ಯಾಚ್ ಆಗಿದ್ದರೆ ಆಗಲೂ ಪಂಜಾಬ್ ತಂಡ ಟೈಗೆ ಸಮಾಧಾನ ಕಾಣಬೇಕಾಗುತ್ತಿತ್ತು. ಈ ಮುನ್ನ ಡೆಲ್ಲಿ ಮತ್ತು ಕೆಕೆಆರ್ ವಿರುದ್ಧವೂ ಪಂಜಾಬ್ ತಂಡ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಎಡವಿ ಸೋಲು ಕಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರೀತಿ ಝಿಂಟಾ ತಂಡ ಮತ್ತೊಮ್ಮೆ ಸೋಲಿನ ಆತಂಕ ಮೂಡಿಸಿದ್ದ ಬಗ್ಗೆ ತಮಾಷೆ ಮಾಡಿದ್ದಾರೆ.
ಕೊನೇ ಓವರ್ನಲ್ಲಿ ಪ್ರೀತಿ ಝಿಂಟಾ ಅವರು ಆತಂಕದಿಂದ ನೀಡಿರುವ ಮುಖಭಾವನೆ ಮತ್ತು ಕೊನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದಾಗ ನಗುಬೀರಿದ ಚಿತ್ರಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಹೀಗಾಗಿ ಪಂದ್ಯದ ಬಳಿಕ ಪ್ರೀತಿ ಝಿಂಟಾ ಅವರು, ‘ಕೊನೆಗೂ ನಮ್ಮ ತಂಡಕ್ಕೆ ಅತ್ಯಂತ ಅಗತ್ಯವಾಗಿದ್ದ ಗೆಲುವು ದೊರೆತಿದೆ. ಕ್ರಿಕೆಟ್ ಹೆಸರಿನಲ್ಲಿ ನಮ್ಮ ತಂಡ ಜನರಿಗೆ ಹೃದಯಾಘಾತ ತರದಿರಲಿ ಎಂದು ಬಯಸುತ್ತೇನೆ. ದಯವಿಟ್ಟು ದುರ್ಬಲ ಹೃದಯದವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಂದ್ಯಗಳನ್ನು ನೋಡಬೇಡಿ ಎಂದು ಎಚ್ಚರಿಕೆ ನೀಡುತ್ತೇನೆ. ಕೊನೆಯಲ್ಲಿ ಆರ್ಸಿಬಿ ತಂಡದ ಬೌಲರ್ಗಳು ತೋರಿದ ಪ್ರತಿಹೋರಾಟವನ್ನು ನಿಜಕ್ಕೂ ಮೆಚ್ಚುತ್ತೇನೆ’ ಎಂದು ಟ್ವೀಟಿಸಿದ್ದಾರೆ.