

ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ-ಒಡತಿ ಹಾಗೂ ಬಾಲಿವುಡ್ ನಟಿ ಪ್ರೀತಿ ಝಿಂಟಾ ಅವರು ಐಪಿಎಲ್ 13ನೇ ಆವೃತ್ತಿಗಾಗಿ ದುಬೈಗೆ ತೆರಳಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಪತಿ ಮತ್ತು ಕುಟುಂಬದೊಂದಿಗೆ ಅಮೆರಿಕದಲ್ಲಿದ್ದ ಪ್ರೀತಿ ಝಿಂಟಾ ಅವರು ಇದೀಗ ದುಬೈನಲ್ಲಿ ಐಪಿಎಲ್ಗೆ ತಂಡ ನಡೆಸುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಲು ತೆರಳಿದ್ದಾರೆ.
ಐಪಿಎಲ್ ಪಂದ್ಯಗಳ ವೇಳೆ ಕ್ರೀಡಾಂಗಣದಲ್ಲಿ ಹಾಜರಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರರಿಗೆ ಪ್ರೋತ್ಸಾಹ ನೀಡುವ ಗಮನ ಸೆಳೆಯುತ್ತ ಬಂದಿರುವ ಪ್ರೀತಿ ಝಿಂಟಾ, ದುಬೈಗೆ ಕಾಲಿಟ್ಟ ವೇಳೆ ವಿಮಾನ ನಿಲ್ದಾಣ ಖಾಲಿ ಖಾಲಿಯಾಗಿದ್ದ ಬಗ್ಗೆ ಟ್ವಿಟರ್ನಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ದುಬೈ ವಿಮಾನ ನಿಲ್ದಾಣ ಇಷ್ಟೊಂದು ಖಾಲಿಯಾಗಿದ್ದನ್ನು ಹಿಂದೆಂದೂ ನೋಡಿರಲಿಲ್ಲ ಎಂದಿದ್ದಾರೆ. ಅಲ್ಲದೆ ಕರೊನಾ ವೈರಸ್ ಹಾವಳಿಯ ಸಮಯದಲ್ಲಿ ವಿಮಾನ ಪ್ರಯಾಣ ಅತ್ಯಂತ ವಿಚಿತ್ರವಾಗಿರುತ್ತದೆ ಎಂದಿದ್ದಾರೆ.
ಈ ಮುನ್ನ 2014ರಲ್ಲಿ ಯುಎಇಯಲ್ಲಿ ಮೊದಲ ಬಾರಿ ಐಪಿಎಲ್ ಟೂರ್ನಿಯ ಮೊದಲಾರ್ಧದ ಪಂದ್ಯಗಳು ನಡೆದಿದ್ದ ವೇಳೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆಡಿದ ಎಲ್ಲ 5 ಪಂದ್ಯಗಳಲ್ಲಿ ಗೆದ್ದು ಅಜೇಯ ಸಾಧನೆ ಮಾಡಿತ್ತು.
ದುಬೈಗೆ ಕಾಲಿಟ್ಟ ಬಳಿಕ ಮೊದಲ 6 ದಿನಗಳ ಕಾಲ ಅವರು ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿರಬೇಕಾಗಿದೆ. ಕರೊನಾ ಕಾಲದಲ್ಲಿ ಸ್ಯಾನಿಟೈಸರ್, ಮಾಸ್ಕ್ ಮತ್ತು ಗ್ಲೌಸ್ ಬಳಕೆ ಅಭ್ಯಾಸವಾಗಿ ಬಿಟ್ಟಿದೆ ಎಂದು ಪ್ರೀತಿ ಝಿಂಟಾ ಹೇಳಿದ್ದಾರೆ. ಮುಂಬರುವ ಐಪಿಎಲ್ನಲ್ಲಿ ಪಂದ್ಯಗಳಿಗೆ ಪ್ರೇಕ್ಷಕರ ಪ್ರವೇಶಕ್ಕೆ ನಿರ್ಬಂಧವಿರುವ ಕಾರಣ, ಪ್ರೀತಿ ಝಿಂಟಾ ಅವರೇ ಪ್ರಮುಖವಾಗಿ ತಂಡಕ್ಕೆ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕಾಗಿದೆ.