ಪಂಜಾಬ್​ ಕಿಂಗ್ಸ್​ ಮಾಲೀಕರ ಜಟಾಪಟಿ! ಕೋರ್ಟ್​ ಮೊರೆ ಹೋದ ನಟಿ ಪ್ರೀತಿ ಜಿಂಟಾ

ವಿಜಯವಾಣಿ - 2024-08-17T074122.086
Published on

ನವದೆಹಲಿ: ಬಾಲಿವುಡ್​ ಬ್ಯೂಟಿ, ನಟಿ ಪ್ರೀತಿ ಜಿಂಟಾ ಅಂದರೆ ಇಂದಿಗೂ ಅದೇನೋ ಸಿನಿಪ್ರಿಯರಿಗಿಂತ ಕ್ರಿಕೆಟ್ ಪ್ರಿಯರಿಗೆ ಭಾರೀ ಅಚ್ಚುಮೆಚ್ಚು. ಪ್ರತಿವರ್ಷ ಬಿಸಿಸಿಐ ನಡೆಸುವ ಇಂಡಿಯನ್ ಪ್ರೀಮಿಯರ್​ ಲೀಗ್​ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್​ ಫ್ರಾಂಚೈಸಿ ಮಾಲೀಕರಾಗಿ ಸ್ಟೇಡಿಯಂಗೆ ಹಾಜರಾಗುವ ನಟಿಯನ್ನು ನೋಡಲೆಂದೇ ಒಂದಷ್ಟು ಅಭಿಮಾನಿಗಳು ಮೈದಾನಕ್ಕೆ ಬರುತ್ತಾರೆ. ಐಪಿಎಲ್​ ಪ್ರಾರಂಭವಾದ ಮೊದಲಿನಿಂದಲೂ ಪಂಜಾಬ್ ತಂಡದ ಮಾಲೀಕರಲ್ಲಿ ತಾವು ಕೂಡ ಒಬ್ಬರಾಗಿರುವ ಪ್ರೀತಿ, ಯಾವ ವಿಚಾರದಲ್ಲಿಯೂ ದೊಡ್ಡ ಮಟ್ಟದಲ್ಲಿ ವಿವಾದಕ್ಕೆ ಗುರಿಯಾದವರಲ್ಲ. ಆದ್ರೆ, ಇದೀಗ ಫ್ರಾಂಚೈಸಿ ಮಾಲೀಕತ್ವದಲ್ಲಿ ಆದ ಕೆಲವು ಗೊಂದಲದಿಂದ ನಟಿ ನೇರವಾಗಿ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಖ್ಯಾತ ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ಕೆಪಿಎಚ್ ಡ್ರೀಮ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಮೂಲಕ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯಲ್ಲಿ 23 ಪ್ರತಿಶತ ಪಾಲನ್ನು ಹೊಂದಿದ್ದಾರೆ. ಚಂಡೀಗಢ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಮೇಲ್ಮನವಿಯ ಪ್ರಕಾರ, ಸಹ-ಮಾಲೀಕ ಮೋಹಿತ್ ಬರ್ಮನ್ ತಂಡದಲ್ಲಿನ ತನ್ನ ಷೇರುಗಳ ಭಾಗವನ್ನು ಬೇರೆ ವ್ಯಕ್ತಿಗೆ ಮಾರಾಟ ಮಾಡುವುದನ್ನು ತಡೆಯಲು ಅವರು (ಪ್ರೀತಿ ಜಿಂಟಾ) ಬಯಸುತ್ತಿದ್ದಾರೆ.

ಕೆಪಿಎಚ್ ಡ್ರೀಮ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಮುಖೇನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಪಾಲು ಪಡೆದಿರುವ ಪ್ರೀತಿ ಜಿಂಟಾ, ಸಹ ಮಾಲೀಕ ಮೋಹಿತ್ ಬರ್ಮನ್ ಜತೆ ಪಾಲನ್ನು ಹಂಚಿಕೊಳ್ಳುತ್ತಾರೆ. ಬರ್ಮನ್​ಗೆ 11.5% ಶೇರ್​ ಇದ್ದರೆ, ಪ್ರೀತಿ ಮತ್ತು ನೆಸ್ ವಾಡಿಯಾ ತಲಾ 23% ಶೇರ್​ ಹೊಂದಿದ್ದಾರೆ. ಇನ್ನು ನಾಲ್ಕನೇ ಪಾಲನ್ನು ಕರುಣ್ ಪೌಲ್ ಪಡೆದಿದ್ದಾರೆ. ಆದ್ರೆ, ಮಾಲೀಕತ್ವದಲ್ಲಿ ತಕರಾರು ಭುಗಿಲೆದ್ದಿರುವುದು ಬರ್ಮನ್​ ನಿರ್ಧಾರದಿಂದ ಎಂಬುದು ವರದಿಯಿಂದ ತಿಳಿದುಬಂದಿದೆ. ಅಸಲಿಗೆ ಮೋಹಿತ್​ ತನ್ನ ಪಾಲನ್ನು ಮತ್ತೊಬ್ಬರಿಗೆ ಮಾರಾಟ ಮಾಡಲು ಮುಂದಾದ ವಿಷಯಕ್ಕೆ ಆಕ್ಷೇಪಿಸಿರುವ ಪ್ರೀತಿ, ಇದೀಗ ನ್ಯಾಯಾಲಯ ಮೊರೆ ಹೋಗಿದ್ದು, ಮಧ್ಯಸ್ಥಿಕೆ ಮತ್ತು ರಾಜಿ ಕಾಯಿದೆ-1996ರ ಸೆಕ್ಷನ್ 9ರ ಅಡಿಯಲ್ಲಿ ಮಧ್ಯಂತರ ಕ್ರಮಗಳು ಮತ್ತು ನಿರ್ದೇಶನಗಳನ್ನು ಕೋರಿದ ಪ್ರೀತಿ ಜಿಂಟಾ, ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ.

ಇನ್ನು ಈ ವಿವಾದಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರತಿಕ್ರಿಯಿಸದ ಮೋಹಿತ್​, ಆಕೆಯ ಆರೋಪಗಳು ಸುಳ್ಳು. ನಾನ್ಯಾಕೆ ನನ್ನ ಶೇರ್​ಗಳನ್ನು ಬೇರೆಯವರಿಗೆ ಕೊಡಲಿ? ಈಗಿರುವ ಪಾಲನ್ನು ಯಾರಿಗೂ ಮಾರಾಟ ಮಾಡುವ ಉದ್ದೇಶವಿಲ್ಲ ಎಂದು ತನ್ನ ಮೇಲಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಸದ್ಯ ಇವರಿಬ್ಬರ ಜಗಳ ತಾರಕಕ್ಕೇರಿದ್ದು, ಮುಂದೆ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net