

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)-2020ರ ನಿನ್ನೆಯ ಪಂದ್ಯ ರೋಚಕವಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡ ಸಮಬಲದಲ್ಲಿ ಸ್ಕೋರ್ ಗಳಿಸಿ, ಬಳಿಕ ಸೂಪರ್ ಓವರ್ನಲ್ಲಿ ಕೊಹ್ಲಿ ಪಡೆ ಗೆದ್ದಿದೆ.
ಕಳೆದ ಮ್ಯಾಚ್ನಲ್ಲಿ ಪಂಜಾಬ್ ವಿರುದ್ಧ ಹೀನಾಯ ಸೋಲು ಕಂಡಿದ್ದ ಆರ್ಸಿಬಿ ನಿನ್ನೆನ ಪಂದ್ಯದಲ್ಲಿ ಗೆದ್ದು ಬೀಗಿದೆ. ನಿನ್ನೆ ಆರ್ಸಿಬಿ ವಿನ್ ಆಗುತ್ತಿದ್ದಂತೆ ನಟಿ, ಕಿಂಗ್ಸ್ ಇಲೆವೆನ್ ತಂಡದ ಒಡತಿ ಪ್ರೀತಿ ಜಿಂಟಾ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲ, ಆರ್ಸಿಬಿ ಮತ್ತು ಕೊಹ್ಲಿಯ ಟೀಕಾಕಾರನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿದ್ದಾರೆ.
ನಿನ್ನೆ ಸೂಪರ್ ಓವರ್ನಲ್ಲಿ ಮುಂಬೈ ತಂಡ 7 ರನ್ಗಳನ್ನಷ್ಟೇ ಗಳಿಸಿತ್ತು. ಅದಕ್ಕೆ ಪ್ರತಿಯಾಗಿ ಆರ್ಸಿಬಿಯ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಜೋಡಿ 11 ರನ್ ಬಾರಿಸಿ ಮ್ಯಾಚ್ ತಮ್ಮದಾಗಿಸಿಕೊಂಡರು. ಅದರಲ್ಲೂ ಕೊಹ್ಲಿ ಕೊನೇ ಬಾಲ್ನ್ನು ಬೌಂಡರಿಗೆ ಅಟ್ಟಿ, ಪಂದ್ಯದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಇದನ್ನೂ ಓದಿ: ಶಾಲೆ ಪ್ರಾರಂಭವಾಗುವುದು ತಡವಾದಷ್ಟೂ ಬಾಲ್ಯ ವಿವಾಹಗಳು ಹೆಚ್ಚಾಗುತ್ತವೆ…!
ಅದಾದ ಬಳಿಕ ಟ್ವೀಟ್ ಮಾಡಿದ ಪ್ರೀತಿ ಜಿಂಟಾ, ಇದೊಂದು ಥ್ರಿಲ್ ತಂದುಕೊಟ್ಟ ಸೂಪರ್ ಓವರ್ ಪಂದ್ಯ. ಎರಡೂ ತಂಡಗಳೂ ತುಂಬ ಉತ್ತಮವಾಗಿ ಆಟ ಆಡಿವೆ. ಮುಂಬೈನಲ್ಲಿ ಇಶಾನ್ ಕಿಶಾನ್ ಅತ್ಯುತ್ತಮ ಆಟವಾಡಿದರು. ಆದರೆ ಅವರ ಪಾಲಿಗೆ ಗೆಲುವು ಸಿಗಲಿಲ್ಲ. ಜಯ ಗಳಿಸಿದ ಆರ್ಸಿಬಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾಗೇ ವಿರಾಟ್ ಕೊಹ್ಲಿಯ ಟೀಕಾಕಾರರಿಗೂ ಅಭಿನಂದನೆಗಳು. ಯಾಕೆಂದರೆ ಕೊನೇ ಒಂದು ಬಾಲ್ 4 ರನ್ ಗೆದ್ದುಕೊಟ್ಟಿತು. ಅದೇ ಪಂದ್ಯ ಗೆಲ್ಲಲೂ ಕಾರಣವಾಯಿತು. ಫಾರ್ಮ್ ತಾತ್ಕಾಲಿಕ..ಆದರೆ ಕ್ಲಾಸ್ ಎಂಬುದು ಶಾಶ್ವತ. ಹಾಗಾಗಿ ಎಲ್ಲರೂ ಶಾಂತ, ಸಮಾಧಾನವಾಗಿರಿ ಎಂದು ಹೇಳಿದ್ದಾರೆ.
ಕಳೆದ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಮೂಲಕ ಟೀಕಾಕಾರರ ಬಾಯಿಗೆ ಆಹಾರವಾಗಿದ್ದ ವಿರಾಟ್ ಕೊಹ್ಲಿಯಿಂದಲೇ ಈ ಪಂದ್ಯ ಆರ್ಸಿಬಿಗೆ ಒಲಿಯಿತು. ಈಗ ಅದನ್ನೇ ಪ್ರೀತಿ ಜಿಂಟಾ ಕೂಡ ಹೇಳಿದ್ದಾರೆ. (ಏಜೆನ್ಸೀಸ್)