ಇನ್ಮುಂದೆ ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಪ್ರವೀಣ್​ ತಂಬೆ ಆಟ..

PRAVIN TAMBE FOR WEB FINAL
Published on

ಮುಂಬೈ: ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ (ಸಿಪಿಎಲ್​) ಆಡಲು ತುದಿಗಾಲಲ್ಲಿ ನಿಂತಿರುವ ಮುಂಬೈ ತಂಡದ ಮಾಜಿ ಆಟಗಾರ ಪ್ರವೀಣ್​ ತಂಬೆ ದೇಶೀಯ ಕ್ರಿಕೆಟ್​ನಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಇದಕ್ಕೂ ಮೊದಲು ನಿವೃತ್ತಿ ಘೋಷಿಸಿ ವಾಪಸ್​ ಪಡೆದಿದ್ದ ಪ್ರವೀಣ್​​ ತಂಬೆ ಇದೀಗ 2ನೇ ಬಾರಿ ಅಧಿಕೃತವಾಗಿ ನಿವೃತ್ತಿ ಹೇಳಿದ್ದು, ಸಿಪಿಎಲ್​ನಲ್ಲಿ ಆಡಲು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ನಿರಾಕ್ಷೇಪಣಾ ಪತ್ರವೂ (ಎನ್​ಒಸಿ) ದಕ್ಕಲಿದೆ. 48 ವರ್ಷದ ತಂಬೆ ಅವರನ್ನು ಶಾರೂಕ್​ ಖಾನ್​ ಒಡೆತನ ಸಿಪಿಎಲ್​ ತಂಡ ಟ್ರಿನಿಬಾಗೊ ನೈಟ್​ ರೈಡರ್ಸ್​ ತಂಡ ಸೋಮವಾರ ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ಸಿಪಿಎಲ್​ನಲ್ಲಿ ಆಡಲಿರುವ ಭಾರತದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: VIDEO: ಎಂಎಸ್​ ಧೋನಿಗೆ ಅಗ್ರಕ್ರಮಾಂಕದಲ್ಲಿ ಆಡುವ ಸಾಮರ್ಥ್ಯವಿತ್ತು ಎಂದ ಸೌರವ್​ ಗಂಗೂಲಿ

ಪ್ರಥಮ ದರ್ಜೆ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದು, ಬಿಸಿಸಿಐ ನಿಯಮದಂತೆ ನಿವೃತ್ತಿ ಹೊಂದಿದ್ದರಷ್ಟೇ ವಿದೇಶಿ ಲೀಗ್​ಗಳಲ್ಲಿ ಆಡಲು ಸಾಧ್ಯ. ಇದೀಗ ತಂಬೆ ಸಿಪಿಎಲ್​ನಲ್ಲಿ ಆಡಲು ಆರ್ಹರಾದರೆ, ಐಪಿಎಲ್​ನಲ್ಲಿ ಆಡುವಂತಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 6 ತಂಡಗಳ ಸಿಪಿಎಲ್ 2020ರ ಟೂರ್ನಿ ಆಗಸ್ಟ್​ 8 ರಿಂದ ಸೆಪ್ಟೆಂಬರ್​ 10 ರವರೆಗೆ ನಡೆಯಲಿದ್ದು, ಕರೊನಾ ವೈರಸ್​ ಭೀತಿಯಿಂದಾಗಿ ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ. ಪ್ರವೀಣ್​​ ತಂಬೆ 41ನೇ ವಯಸ್ಸಿನಲ್ಲಿ ರಾಜಸ್ಥಾನ ರಾಯಲ್ಸ್​ ಪರ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದರು. ವಿಶ್ವ ಶ್ರೀಮಂತ ಕ್ರಿಕೆಟ್​ ಲೀಗ್​ಗೆ ಪದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದರು. ರಾಯಲ್ಸ್​ ಪರ ಆಡಿದ್ದ 33 ಪಂದ್ಯಗಳಿಂದ 28 ವಿಕೆಟ್​ ಕಬಳಿಸಿದ್ದರು. ಒಂದು ವೇಳೆ ಅಂತಾರಾಷ್ಟ್ರೀಯ ಪ್ರಮಾಣದ ನಿರ್ಬಂಧ ಮುಂದುವರಿದಲ್ಲಿ ತಂಬೆ ಪ್ರಸಕ್ತ ವರ್ಷದ ಸಿಪಿಎಲ್​ ಕನಸು ಕೂಡ ಕಮರಲಿದೆ.

ಮುಂಬೈ ಕ್ರಿಕೆಟ್​ ಸಂಸ್ಥೆ (ಎಂಸಿಎ) ಅಧಿಕಾರಿಗಳು ತಂಬೆ ನಿವೃತ್ತಿಯನ್ನು ಖಚಿತಪಡಿಸಿದ್ದಾರೆ. ಸದ್ಯ ತಂಬೆ ನಿವೃತ್ತಿಯಾಗಿದ್ದಾರೆ, ಇದಕ್ಕೂ ಮೊದಲು ನಿವೃತ್ತಿಯಾಗಿ, ವಾಪಸ್​ ಪಡೆದಿದ್ದರು. ಈ ಬಾರಿ ಇಮೇಲ್​ ಮೂಲಕ ನಿವೃತ್ತಿ ಹೇಳಿದ್ದಾರೆ ಎಂದು ಎಂಸಿಎ ಅಧಿಕಾರಿಗಳು ತಿಳಿಸಿದ್ದಾರೆ. ಐಪಿಎಲ್​ನಲ್ಲಿ 20 ಲ ರೂಪಾಯಿಗೆ ಕೆಕೆಆರ್​ ತಂಡದ ಪಾಲಾಗಿದ್ದರೂ ತಂಬೆ ಟಿ10 ಲೀಗ್​ನಲ್ಲಿ ಆಡಿದ ಹಿನ್ನೆಲೆಯಲ್ಲಿ ಬಿಸಿಸಿಐ ಅವರನ್ನು ಅಮಾನತುಗೊಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net