VIDEO: ಕೆರಿಬಿಯನ್​ ಟಿ20 ಲೀಗ್​ಗೆ ಪದಾರ್ಪಣೆ ಮಾಡಿದ 48 ವರ್ಷದ ಸ್ಪಿನ್ನರ್​ ಪ್ರವೀಣ್​ ತಂಬೆ..!

praveen tambe
Published on

ಬೆಂಗಳೂರು: ಇವತ್ತಿಗೆ (ಆ.26) ಸರಿಯಾಗಿ 45 ದಿನಗಳಲ್ಲಿ 49ನೇ ವರ್ಷಕ್ಕೆ ಕಾಲಿಡಲಿರುವ ಮುಂಬೈ ಮೂಲದ ಕ್ರಿಕೆಟಿಗ ಪ್ರವೀಣ್​ ತಂಬೆ, ವಯಸ್ಸು ಕೇವಲ ಸಂಖ್ಯೆ ಎಂದು ನಿರೂಪಿಸಿದವರು. ಈ ವಯಸ್ಸಿನಲ್ಲೂ ಯುವ ಕ್ರಿಕೆಟಿಗರಿಗೆ ಮಾದರಿಯಾಗುವಂತೆ ಸಿದ್ಧತೆಕೈಗೊಳ್ಳುವ ತಂಬೆ, ಬುಧವಾರ ಕೆರಿಬಿಯನ್​ ಪ್ರೀಮಿಯರ್​ ಲೀಗ್​ (ಸಿಪಿಎಲ್​) ಆಡಿದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಂಡರು. ಜತೆಗೆ ಸಿಪಿಎಲ್​ ಆಡುತ್ತಿರುವ ಹಿರಿಯ ಆಟಗಾರ ಎಂಬ ಗೌರವಕ್ಕೂ ಭಾಜನರಾದರು. ಟ್ರಿನ್​ಬಾಗೊ ನೈಟ್​ ರೈಡರ್ಸ್​ ತಂಡದ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಮೂಲಕ ಸಿಪಿಎಲ್​ಗೆ ಪದಾರ್ಪಣೆ ಮಾಡಿದರು.

ಕಳೆದ ವರ್ಷದ ಡಿಸೆಂಬರ್​ನಲ್ಲಿ ಐಪಿಎಲ್​ ಫ್ರಾಂಚೈಸಿ ಕೋಲ್ಕತ ನೈಟ್​ ರೈಡರ್ಸ್​ ತಂಡ ತಂಬೆ ಅವರನ್ನು ಕೊಂಡುಕೊಂಡಿದ್ದರೂ ಬಿಸಿಸಿಐ ಅನರ್ಹಗೊಳಿಸಿತ್ತು. 2018ರಲ್ಲಿ ನಿವೃತ್ತಿ ಘೋಷಿಸಿ ದುಬೈನಲ್ಲಿ ಟಿ10 ಲೀಗ್​ನಲ್ಲಿ ಆಡಿದ್ದರು. ಬಳಿಕ ನಿವೃತ್ತಿ ವಾಪಸ್​ ಪಡೆದು ಮುಂಬೈ ಟಿ10 ಲೀಗ್​ ಆಡಿದ್ದರು. ಬಳಿಕ ಐಪಿಎಲ್​ಗೂ ನೋಂದಾಯಿಸಿಕೊಂಡಿದ್ದರು. ಆಟಗಾರರ ಹರಾಜಿನಲ್ಲಿ ಕೆಕೆಆರ್​ 20 ಲಕ್ಷ ರೂಪಾಯಿಗೆ ತಂಬೆ ಅವರನ್ನು ಕೊಂಡುಕೊಂಡಿತ್ತು. ಆದರೆ, ವಿದೇಶಿ ಲೀಗ್​ನಲ್ಲಿ ಆಡಿದ್ದು ನಿಯಮ ಉಲ್ಲಂಘಿಸಿದ್ದರಿಂದ ಬಿಸಿಸಿಐ ತಂಬೆ ಅವರನ್ನು ಅನರ್ಹಗೊಳಿಸಿತ್ತು.

ತಂಬೆ 2013 ಹಾಗೂ 2015ರಲ್ಲಿ ಐಪಿಎಲ್​ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್​ ತಂಡದ ಪರ ಆಡಿದ್ದರು. ಸುನೀಲ್​ ನಾರಾಯಣ್​ ಬದಲಿಗೆ ತಂಬೆ ಟಿಕೆಆರ್​ ತಂಡದಲ್ಲಿ ಸ್ಥಾನ ಪಡೆದರು. ಇದಕ್ಕೂ ಮೊದಲು ಯುವರಾಜ್​ ಸಿಂಗ್​, ಜಹೀರ್​ ಖಾನ್​, ವೀರೇಂದ್ರ ಸೆಹ್ವಾಗ್​, ಜಹೀರ್​ ಖಾನ್​ ವಿದೇಶಿ ಲೀಗ್​ಗಳಲ್ಲಿ ಆಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net