

ದುಬೈ: ಕರ್ನಾಟಕದ ಲೆಗ್ ಸ್ಪಿನ್ನರ್ ಪ್ರವೀಣ್ ದುಬೆ ಐಪಿಎಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಪದಾರ್ಪಣೆ ಮಾಡಿದರು. ಗಾಯಾಳು ಸ್ಪಿನ್ನರ್ ಅಮಿತ್ ಮಿಶ್ರಾ ಲೀಗ್‌ನಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಪ್ರವೀಣ್ ದುಬೆ ಬದಲಿ ಆಟಗಾರನಾಗಿ ಡೆಲ್ಲಿ ತಂಡ ಸೇರ್ಪಡೆಗೊಂಡಿದ್ದರು. ಇದಕ್ಕೂ ಮೊದಲು 2016, 2017ರಲ್ಲಿ ಆರ್‌ಸಿಬಿ ತಂಡದ ಭಾಗವಾಗಿದ್ದರೂ ದುಬೆ ಪದಾರ್ಪಣೆ ಮಾಡಿರಲಿಲ್ಲ. ಪ್ರಸಕ್ತ ಲೀಗ್‌ನಲ್ಲಿ ಆರ್‌ಸಿಬಿ ತಂಡದೊಂದಿಗೆ ನೆಟ್ ಬೌಲರ್ ಆಗಿ ತೆರಳಿದ್ದ ಪ್ರವೀಣ್ ದುಬೆ, ಪ್ರತಿಷ್ಠಿತ ಲೀಗ್‌ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದರು. ಕೆಪಿಎಲ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಆಡಿದ್ದರು. ಹಾಲಿ ಐಪಿಎಲ್‌ನಲ್ಲಿ ಆಡುತ್ತಿರುವ ಕರ್ನಾಟಕದ 13ನೇ ಆಟಗಾರನಾಗಿದ್ದಾರೆ.
ಕರ್ನಾಟಕದ ತಂಡದ ಪರ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ 14 ಪಂದ್ಯಗಳಿಂದ 16 ವಿಕೆಟ್ ಕಬಳಿಸಿದ್ದರು. ಪದಾರ್ಪಣೆ ಪಂದ್ಯದಲ್ಲಿ 13ಎಸೆತಗಳಲ್ಲಿ 7ರನ್‌ಗಳಿಸಿ ದುಬೆ, 3 ಓವರ್ ಎಸೆದು 29 ರನ್ ನೀಡಿದರು. ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಪಂಚ ಕನ್ನಡಿಗರಾದ ರಾಹುಲ್, ಮಯಾಂಕ್ ಅಗರ್ವಾಲ್, ಕೆ.ಗೌತಮ್, ಕರುಣ್ ನಾಯರ್ ಹಾಗೂ ಜೆ.ಸುಚಿತ್ ಇದ್ದರೆ, ರಾಜಸ್ಥಾನ ರಾಯಲ್ಸ್ ತಂಡದಲ್ಲಿ ರಾಬಿನ್ ಉತ್ತಪ್ಪ, ಶ್ರೇಯಸ್ ಅಯ್ಯರ್ ಹಾಗೂ ಅನಿರುದ್ಧ್ ಜೋಶಿ ಇದ್ದಾರೆ. ಆರ್‌ಸಿಬಿ ಪರ ದೇವದತ್ ಪಡಿಕಲ್ ಹಾಗೂ ಪವನ್ ದೇಶಪಾಂಡೆ, ಸನ್‌ರೈಸರ್ಸ್ ಪರ ಮನೀಷ್ ಪಾಂಡೆ ಹಾಗೂ ಕೆಕೆಆರ್ ಪರ ಪ್ರಸಿದ್ಧ್ ಕೃಷ್ಣ ಆಡುತ್ತಿದ್ದಾರೆ.
ಕರ್ನಾಟಕದ 13 ಆಟಗಾರರ ಪೈಕಿ ರಾಹುಲ್ ಪಂಜಾಬ್ ತಂಡದ ನಾಯಕನಾಗಿದ್ದಾರೆ. ಜೆ.ಸುಚಿತ್, ಪವನ್ ದೇಶಪಾಂಡೆ, ಅನಿರುದ್ಧ್ ಜೋಶಿ, ಪ್ರಸಕ್ತ ವರ್ಷ ಇದುವರೆಗೂ ಒಂದು ಪಂದ್ಯವಾಡಿಲ್ಲ. ಜೆ.ಸುಚಿತ್ ಪಂಜಾಬ್ ಪರ ಬದಲಿ ಫೀಲ್ಡರ್ ಆಗಿ ಕೆಲ ಪಂದ್ಯಗಳಿಗೆ ಕಾರ್ಯನಿರ್ವಹಿಸಿದ್ದಾರೆ.