

ಕೋಪನ್ಹೇಗನ್ (ಡೆನ್ಮಾರ್ಕ್): ಭಾರತದ ಅನುಭವಿ ಷಟ್ಲರ್ ಎಚ್ಎಸ್ ಪ್ರಣಯ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಪ್ರಣಯ್ ಸೆಮಿಫೈನಲ್ ಪಂದ್ಯದಲ್ಲಿ ದಿಟ್ಟ ಹೋರಾಟದ ನಡುವೆ ಥಾಯ್ಲೆಂಡ್ನ ಕುನ್ಲವುಟ್ ವಿಟಿಡ್ಸರ್ನ್ ವಿರುದ್ಧ ಪರಾಭವಗೊಂಡರು. ಇದರೊಂದಿಗೆ ಭಾರತ ತಂಡ ಏಕೈಕ ಪದಕ ಗೆಲುವಿನೊಂದಿಗೆ ಟೂರ್ನಿಯಲ್ಲಿ ಸವಾಲು ಅಂತ್ಯಗೊಳಿಸಿದೆ.
ವಿಶ್ವ ನಂ. 9 ಆಟಗಾರ ಪ್ರಣಯ್ ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಉಪಾಂತ್ಯ ಹೋರಾಟದಲ್ಲಿ 3ನೇ ಶ್ರೇಯಾಂಕಿತ ಕುನ್ಲವುಟ್ ವಿಟಿಡ್ಸರ್ನ್ ವಿರುದ್ಧ 21-18, 13-21, 14-21 ಗೇಮ್ಗಳಿಂದ ಸೋಲು ಅನುಭವಿಸಿದರು. ಮೊದಲ ಗೇಮ್ನಲ್ಲಿ ಗೆಲುವು ದಾಖಲಿಸಿ ಶುಭಾರಂಭ ಕಂಡ ಕೇರಳದ 31 ವರ್ಷದ ಆಟಗಾರ ಪ್ರಣಯ್ ನಂತರದ ಎರಡು ಗೇಮ್ಗಳಲ್ಲಿ ನಿರೀತ ನಿರ್ವಹಣೆ ತೋರಲು ವಿಫಲರಾದರು. ಇದರಿಂದಾಗಿ ಅಂತಿಮವಾಗಿ ಒಂದು ಗಂಟೆ ಮತ್ತು 16 ನಿಮಿಷಗಳ ಹೋರಾಟದಲ್ಲಿ ಸೋಲೊಪ್ಪಿಕೊಂಡರು.
ವಿಶ್ವ ನಂ. 3 ಆಟಗಾರ ಕುನ್ಲವುಟ್ ವಿಟಿಡ್ಸರ್ನ್ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ 4ನೇ ಶ್ರೇಯಾಂಕಿತ ಜಪಾನ್ನ ಕೋಡೈ ನರಯೋಕಾ ಅಥವಾ ಆತಿಥೇಯ ಡೆನ್ಮಾರ್ಕ್ನ ಆಂಡರ್ಸ್ ಆಂಟೋನ್ಸೆನ್ ವಿರುದ್ಧ ಸೆಣಸಲಿದ್ದಾರೆ. ಎಚ್ಎಸ್ ಪ್ರಣಯ್ ಈ ಮುನ್ನ ಕ್ವಾರ್ಟರ್ಫೈನಲ್ನಲ್ಲಿ ವಿಶ್ವ ನಂ. 1 ಹಾಗೂ ಹಾಲಿ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸನ್ಗೆ ತವರು ಅಂಗಣದಲ್ಲೇ ಆಘಾತಕಾರಿ ಸೋಲುಣಿಸಿದ ಪದಕ ಖಾತ್ರಿ ಪಡಿಸಿಕೊಂಡಿದ್ದರು.
ಚಿನ್ನದ ಪದಕ ಗೆಲ್ಲದಿರುವ ಬಗ್ಗೆ ಬೇಸರವಿದೆ. ಆದರೆ ಕಂಚಿನ ಪದಕವೂ ನನ್ನ ಪಾಲಿಗೆ ಭಾರಿ ಅಮೂಲ್ಯವಾದುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ 12 ವರ್ಷಗಳಿಂದ ಆಡುತ್ತಿರುವೆ. ಯಾವಾಗಲೂ ಇಂಥ ದೊಡ್ಡ ಪದಕವನ್ನು ಕೈಯಲ್ಲಿ ಹಿಡಿದುಕೊಳ್ಳಲು ಬಯಸುತ್ತಿದ್ದೆ ಎಂದು ಎಚ್ಎಸ್ ಪ್ರಣಯ್ ಹೇಳಿದ್ದಾರೆ.
ವಿಶ್ವ ಬ್ಯಾಡ್ಮಿಂಟನ್ನಲ್ಲಿ ಭಾರತದ ಪದಕ ಸಾಧನೆ
*ಪ್ರಕಾಶ್ ಪಡುಕೋಣೆ
ಕಂಚು: 1983
*ಅಶ್ವಿನಿ ಪೊನ್ನಪ್ಪ-ಜ್ವಾಲಾ ಗುಟ್ಟಾ
ಕಂಚು: 2011
*ಪಿವಿ ಸಿಂಧು
ಚಿನ್ನ: 2019
ರಜತ: 2017, 2018
ಕಂಚು: 2013, 2014
*ಸೈನಾ ನೆಹ್ವಾಲ್
ರಜತ: 2015
ಕಂಚು: 2017
*ಸಾಯಿ ಪ್ರಣಿತ್
ಕಂಚು: 2019
*ಕಿಡಂಬಿ ಶ್ರೀಕಾಂತ್
ರಜತ: 2021
*ಲಕ್ಷ್ಯ ಸೇನ್
ಕಂಚು: 2021
*ಸಾತ್ವಿಕ್-ಚಿರಾಗ್ ಶೆಟ್ಟಿ
ಕಂಚು: 2022
ಎಚ್ಎಸ್ ಪ್ರಣಯ್ ವಿಶ್ವ ಚಾಂಪಿಯನ್ಷಿಪ್ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪದಕ ಗೆದ್ದ 5ನೇ ಭಾರತೀಯರೆನಿಸಿದರು. ಸೋಲಿನ ನಡುವೆ ಪ್ರಣಯ್ ಭಾರತಕ್ಕೆ ವಿಶ್ವ ಚಾಂಪಿಯನ್ಷಿಪ್ ಇತಿಹಾಸದಲ್ಲಿ 14ನೇ ಪದಕ ಮತ್ತು 9ನೇ ಕಂಚಿನ ಪದಕ ಗೆದ್ದುಕೊಟ್ಟರು. ಭಾರತ ವಿಶ್ವ ಚಾಂಪಿಯನ್ಷಿಪ್ನಲ್ಲಿ ಸತತ 3ನೇ ವರ್ಷ ಕನಿಷ್ಠ ಒಂದಾದರೂ ಪದಕ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.