ಚೆಸ್​ ವಿಶ್ವಕಪ್​ನಲ್ಲಿ ಪ್ರಜ್ಞಾನಂದ ಇತಿಹಾಸ ಬರೆದಾಗ ಭಾವುಕರಾದ ಅಮ್ಮ, ಫೋಟೋ ವೈರಲ್​…

praznana web
Published on

ಬೆಂಗಳೂರು: ಭಾರತದ ಚೆಸ್​ ದಿಗ್ಗಜ ವಿಶ್ವನಾಥನ್​ ಆನಂದ್​ ಅವರಿಗೆ ಚದುರಂಗದಾಟದಲ್ಲಿ ಅಮ್ಮನೇ ಮೊದಲ ಗುರು. ವಿಶ್ವನಾಥನ್​ ಆನಂದ್​ ನಂತರದಲ್ಲಿ ಚೆಸ್​ ವಿಶ್ವಕಪ್​ನಲ್ಲಿ ಉಪಾಂತ್ಯ ಪ್ರವೇಶಿಸಿದ ಮೊದಲ ಭಾರತೀಯ ಎಂದು ಗುರುವಾರವಷ್ಟೇ ಹೊಸ ಇತಿಹಾಸ ಬರೆದ ತಮಿಳುನಾಡಿನ 18 ವರ್ಷದ ತರುಣ ಆರ್​. ಪ್ರಜ್ಞಾನಂದ ಅವರ ಯಶಸ್ಸಿನಲ್ಲೂ ಅಮ್ಮ ನಾಗಲಕ್ಷ್ಮೀ ಅವರ ಪಾತ್ರ ಅಪೂರ್ವವಾದದ್ದು. ಚೆಸ್​ ವಿಶ್ವಕಪ್​ನಲ್ಲಿ ಎಂಟರ ಟ್ಟದ ಪಂದ್ಯದಲ್ಲಿ ಪ್ರಜ್ಞಾನಂದ ಗೆದ್ದ ಬಳಿಕ ಅಲ್ಲೇ ಇದ್ದ ಅವರ ಅಮ್ಮ ಭಾವುಕರಾದ ಕ್ಷಣದ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಜತೆಗೆ ಈ ಚಿತ್ರಗಳು ಕ್ರೀಡಾ ಪ್ರೇಮಿಗಳ ಮನವನ್ನೂ ಗೆದ್ದಿವೆ.

ಪ್ರಜ್ಞಾನಂದ ಗೆಲುವು ಕಂಡ ಬಳಿಕ ಅಮ್ಮ ಭಾವುಕರಾಗಿ ಕಣ್ಣೀರಿಟ್ಟ ಕ್ಷಣ ಮತ್ತು ಗೆಲುವಿನ ಬಳಿಕ ಪ್ರಜ್ಞಾನಂದ ಮಾತನಾಡುವಾಗ ಅವರ ಅಮ್ಮ ಹೆಮ್ಮೆಯಿಂದ ನಗುಬೀರಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮನಸ್ಸು ಗೆದ್ದಿವೆ. ಪ್ರಜ್ಞಾನಂದ ಸಾಧನೆಯಿಂದ ಅವರ ಅಮ್ಮನಂತೆ ಇಡೀ ದೇಶ ಕೂಡ ಅದೇ ರೀತಿ ಹೆಮ್ಮೆಯ ನಗು ಬೀರುತ್ತಿದೆ ಎಂದು ಚೆಸ್​ಪ್ರೇಮಿಗಳು ಸಂತಸ ಹಂಚಿಕೊಂಡಿದ್ದಾರೆ. ಪ್ರಜ್ಞಾನಂದ ಅವರು ದೇಶಬಾಂಧವ ಹಾಗೂ ಆಪ್ತಮಿತ್ರ ಅರ್ಜುನ್​ ಇರಿಗೈಸಿ ವಿರುದ್ಧವೇ ರೋಚಕ ಹೋರಾಟದಲ್ಲಿ ಗೆಲುವು ದಾಖಲಿಸಿದ್ದು, ಸೆಮೀಸ್​ನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಸೆಣಸಲಿದ್ದಾರೆ.

ಚೆಸ್​ ಟೂರ್ನಿಗಳ ವೇಳೆ ಅಮ್ಮ ಜತೆಯಲ್ಲೇ ಬರುವ ಬಗ್ಗೆ ಮಾತನಾಡಿರುವ ಪ್ರಜ್ಞಾನಂದ, 'ಅವರು ಯಾವಾಗಲೂ ನನ್ನ ಜತೆಯಲ್ಲೇ ಇರುವುದು ಉತ್ತಮವೆನಿಸುತ್ತದೆ. ಆಕೆ ಯಾವಾಗಲೂ ಬೆಂಬಲ ನೀಡುತ್ತಾಳೆ. ಪಂದ್ಯಗಳನ್ನು ಸೋತರೂ ಆಕೆ ನನ್ನನ್ನು ಶಾಂತವಾಗಿಡಲು ಪ್ರಯತ್ನಿಸುತ್ತಾಳೆ. ಇಲ್ಲಿ ಅಮ್ಮ ಇರುವುದು ನನಗೆ ಬಲ' ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net