ಚೆಸ್​ ವಿಶ್ವಕಪ್​ ಫೈನಲ್​ನಲ್ಲಿ ಪ್ರಜ್ಞಾನಂದ ಎಡವಿದ್ದೆಲ್ಲಿ? ಅದೊಂದು ನಡೆ ಪ್ರಶಸ್ತಿ ತಪ್ಪಿಸಿತೇ?

chess web
Published on

ಬಾಕು (ಅಜರ್​ಬೈಜಾನ್​): ಫಿಡೆ ಚೆಸ್​ ವಿಶ್ವಕಪ್​ನಲ್ಲಿ ಅಮೋಘ ನಿರ್ವಹಣೆ ತೋರುವ ಮೂಲಕ ಪ್ರಶಸ್ತಿ ಸುತ್ತಿಗೇರಿದ್ದ ಭಾರತದ ಯುವ ಚದುರಂಗ ಪ್ರತಿಭೆ ಆರ್​. ಪ್ರಜ್ಞಾನಂದ ನಿರ್ಣಾಯಕ ಹಂತದಲ್ಲಿ ಮಾಡಿಕೊಂಡ ಎಡವಟ್ಟಿನಿಂದಾಗಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟರು. ವಿಶ್ವ ನಂ. 1 ಮ್ಯಾಗ್ನಸ್​ ಕಾರ್ಲ್​ಸೆನ್​ ವಿರುದ್ಧದ ಪ್ರಶಸ್ತಿ ಸುತ್ತಿನ ಹೋರಾಟದ ಟೈ ಬ್ರೇಕರ್​ನಲ್ಲಿ ಎಡವಿದ ಪ್ರಜ್ಞಾನಂದ 0.5-1.5ರಿಂದ ಮಣಿದರು.

ಫೈನಲ್​ ಪಂದ್ಯ ಟೈಬ್ರೇಕರ್​ಗೆ ವಿಸ್ತರಿಸಿದಾಗ ಪ್ರಜ್ಞಾನಂದ ಅವರೇ ಫೇವರಿಟ್​ ಎಂದು ಭಾವಿಸಲಾಗಿತ್ತು. ಯಾಕೆಂದರೆ ಈ ಮುನ್ನ ಕ್ವಾರ್ಟರ್​ಫೈ​ನಲ್​ ಮತ್ತು ಸೆಮಿಫೈನಲ್​ನಲ್ಲೂ ಅವರು ಟೈಬ್ರೇಕರ್​ನಲ್ಲೇ ಗೆಲುವು ಒಲಿಸಿಕೊಂಡಿದ್ದರು ಮತ್ತು ರ್ಯಾಪಿಡ್​ ಚೆಸ್​ ಅವರ ನೆಚ್ಚಿನ ಆಟವೂ ಆಗಿತ್ತು. ಆದರೆ ಫೈನಲ್​ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದ್ದಾಗ 'ಸೈನಿಕ'ನನ್ನು ಎಫ್​​5ನಲ್ಲಿ ನಿಲ್ಲಿಸುವ ಮೂಲಕ ಪ್ರಜ್ಞಾನಂದ ಬಹುದೊಡ್ಡ ಎಡವಟ್ಟು ಮಾಡಿಕೊಂಡರು. ಇದು ಕಾರ್ಲ್​ಸೆನ್​ಗೆ ಕಪ್ಪು ಕಾಯಿಯಲ್ಲೂ ಪ್ರಾಬಲ್ಯ ಸಾಧಿಸಲು ನೆರವಾಯಿತು. ಇದರಿಂದಾಗಿ ಪ್ರಜ್ಞಾನಂದಗೆ ಪಂದ್ಯ ಕೈಜಾರುತ್ತಿರುವ ಅರಿವು ಕೂಡ ಆಗಿ ಗೆಲುವು ಬಿಟ್ಟುಕೊಟ್ಟರು.

ಫಲಿಸಿದ ಕಾರ್ಲ್​ಸೆನ್​ ಡ್ರಾ ಕಾರ್ಯತಂತ್ರ

ಫೈನಲ್​ಗೆ ಮುನ್ನ ಫುಡ್​ ಪಾಯಿಸನಿಂಗ್​ನಿಂದ ಬಳಲಿದ ಕಾರ್ಲ್​ಸೆನ್​, ಮೊದಲ 2 ಕ್ಲಾಸಿಕಲ್​ ಪಂದ್ಯಗಳ ಸಮಯವನ್ನು ಅದರಿಂದ ಚೇತರಿಸಿಕೊಳ್ಳಲು ಬಳಸಿಕೊಂಡರು. ಅಂದರೆ ಎರಡೂ ಕ್ಲಾಸಿಕಲ್​ ಪಂದ್ಯಗಳನ್ನು ಡ್ರಾ ಸಾಧಿಸುವ ಉದ್ದೇಶದಿಂದಲೇ ಆಡಿದರು. ಈ ಮೂಲಕ ಟೈಬ್ರೇಕರ್​ ವೇಳೆಗೆ ಸಂಪೂರ್ಣ ಚೇತರಿಕೆ ಕಾಣಲು ಸಮಯ ತೆಗೆದುಕೊಂಡರು. ಅವರ ಈ ಕಾರ್ಯತಂತ್ರ ಅಂತಿಮವಾಗಿ ಉತ್ತಮ ಯಶಸ್ಸನ್ನೂ ತಂದುಕೊಟ್ಟಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net