

ನವದೆಹಲಿ: ( praggnanandhaa ) ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಚೆಸ್ ಟೂರ್ನಿ ಫೈನಲ್‌ನಲ್ಲಿ ಡಿ. ಗುಕೇಶ್ಗೆ ಸೋಲುಣಿಸಿ ಆರ್ ಪ್ರಜ್ಞಾನಂದ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಆರ್. ಪ್ರಜ್ಞಾನಂದ ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ಸೋಲಿಸಿದರೆ, ಡಿ ಗುಕೇಶ್ ಅವರು ಅರ್ಜುನ್ ಎರಿಗೈಸಿ ವಿರುದ್ಧ ಸೋಲನುಭವಿಸಿದರು. ಬಳಿಕ ನಡೆದ ಬ್ಲಿಟ್ಜ್ ಪ್ಲೇಆಫ್‌ಗಳಲ್ಲಿ, ಪ್ರಜ್ಞಾನಂದ ಅವರು ಗುಕೇಶ್ ವಿರುದ್ಧ ಮೊದಲ ಗೇಮ್‌ನಲ್ಲಿ ಸೋತರು. ಆ ಬಳಿಕ ಕಂಬ್ಯಾಕ್ ಮಾಡಿದ ಪ್ರಜ್ಞಾನಂದ ಸತತ ಎರಡು ಗೇಮ್ಗಳನ್ನು ಗೆಲ್ಲುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಚೆಸ್ ಟೂರ್ನಿಯ ಫೈನಲ್ ಸುತ್ತಿನ ಮುಕ್ತಾಯದ ವೇಳೆಗೆ ಡಿ ಗುಕೇಶ್ ಅಗ್ರಸ್ಥಾನ ಅಲಂಕರಿಸಿದರೆ, ಆರ್. ಪ್ರಜ್ಞಾನಂದ ದ್ವಿತೀಯ ಸ್ಥಾನ ಪಡೆದಿದ್ದರು. ಇಬ್ಬರು 8.5 ಅಂಕಗಳನ್ನು ಹೊಂದಿದ್ದರಿಂದ ಚಾಂಪಿಯನ್ ನಿರ್ಣಾಯಕಕ್ಕಾಗಿ ಟ್ರೈಬ್ರೇಕರ್ ಮೊರೆ ಹೋಗಲಾಯಿತು.
ಈ ನಿರ್ಣಾಯಕ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ವಿರುದ್ಧ ಮೇಲುಗೈ ಸಾಧಿಸುವ ಮೂಲಕ ಆರ್. ಪ್ರಜ್ಞಾನಂದ ಟಾಟಾ ಸ್ಟೀಲ್ ಮಾಸ್ಟರ್ಸ್ 2025 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.