ಪ್ರಭ್​ಸಿಮ್ರನ್-ಪ್ರಿಯಾಂಶ್ ಭರ್ಜರಿ ಆಟ: ಕೆಕೆಆರ್ ಚೇಸಿಂಗ್​ಗೆ ಮಳೆ ಅಡ್ಡಿ!

New Project (2)
Published on

ಕೋಲ್ಕತ:ಹಾಲಿ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್‌ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ಇದರೊಂದಿಗೆ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ. 18ನೇ ಆವೃತ್ತಿಯಲ್ಲಿ ಫಲಿತಾಂಶವಿಲ್ಲದೇ ರದ್ದಗೊಂಡ ಮೊದಲ ಪಂದ್ಯ ಇದಾಗಿದೆ.

ಈಡನ್ ಗಾರ್ಡನ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾದ ಪ್ರಭ್‌ಸಿಮ್ರನ್ ಸಿಂಗ್ (83 ರನ್, 49 ಎಸೆತ, 6 ಬೌಂಡರಿ, 6 ಸಿಕ್ಸರ್) ಹಾಗೂ ಪ್ರಿಯಾಂಶ್ ಆರ್ಯ (69 ರನ್, 35 ಎಸೆತ, 8 ಬೌಂಡರಿ, 4 ಸಿಕ್ಸರ್) ಶತಕದ ಜತೆಯಾಟ ನಂತರ ಸ್ಲಾಗ್ ಓವರ್‌ಗಳಲ್ಲಿ ಕೆಕೆಆರ್ ಬೌಲರ್‌ಗಳ ಬಿಗಿ ದಾಳಿಯ ನಡುವೆಯೂ ನಾಯಕ ಶ್ರೇಯಸ್ ಅಯ್ಯರ್ (25* ರನ್, 16 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ 4 ವಿಕೆಟ್‌ಗೆ 201 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಕೊನೇ ಐದು ಓವರ್‌ಗಳಲ್ಲಿ ಕೆಕೆಆರ್ ಬೌಲರ್‌ಗಳು 40 ರನ್ ಮಾತ್ರ ಬಿಟ್ಟುಕೊಟ್ಟು, ರನ್‌ಗತಿಗೆ ನಿಯಂತ್ರಣ ಹೇರಿದರು. ಪ್ರತಿಯಾಗಿ ಚೇಸಿಂಗ್‌ನಲ್ಲಿ ಕೆಕೆಆರ್ ತಂಡ 1 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 7 ರನ್‌ಗಳಿಸಿದಾಗ ಮಳೆ ಆಡಚಣೆಯಿಂದ ಆಟ ನಿಲ್ಲಿಸಲಾಯಿತು. ಬಳಿಕ ಆಟ ಆರಂಭಿಸಲಾಗದೆ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು.

ಕಪ್ಪುಪಟ್ಟಿ ಧರಿಸಿ ಆಟ

ಪಂಜಾಬ್-ಕೆಕೆಆರ್ ಪಂದ್ಯ ಆರಂಭಕ್ಕೂ ಮುನ್ನ ಪಹಲ್ಗಾಮ್ ಉಗ್ರ ದಾಳಿಯಲ್ಲಿ ಮೃತಪಟ್ಟ ಪ್ರವಾಸಿಗರಿಗೆ ಗೌರವ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಜತೆಗೆ ಗಂಟೆ ಬಾರಿಸುವ ಮೂಲಕ ಪಂದ್ಯಕ್ಕೆ ಚಾಲನೆ ನೀಡುವ ಸಂಪ್ರದಾಯವನ್ನು ಕೈಬಿಟ್ಟ ಬಂಗಾಳ ಕ್ರಿಕೆಟ್ ಸಂಸ್ಥೆ, ಮೃತರಿಗೆ ಗೌರವ ಸಲ್ಲಿಸಿತು. ಎರಡು ತಂಡದ ಆಟಗಾರರು ತೋಳಿಗೆ ಕಪ್ಪುಪಟ್ಟಿ ಧರಿಸಿ ಆಡಿದರು.

120:ಪ್ರಿಯಾಂಶ್-ಪ್ರಭ್‌ಸಿಮ್ರನ್ (120) ಐಪಿಎಲ್‌ನಲ್ಲಿ ಕೆಕೆಆರ್ ವಿರುದ್ಧ ಗರಿಷ್ಠ ರನ್‌ಗಳ ಆರಂಭಿಕ ಜತೆಯಾಟದ ನೀಡಿದ ಪಂಜಾಬ್ ಜೋಡಿ ಎನಿಸಿತು. ಕೆಎಲ್ ರಾಹುಲ್-ಕ್ರಿಸ್ ಗೇಲ್ 116 ರನ್ ಸೇರಿಸಿದ್ದು ಹಿಂದಿನ ಗರಿಷ್ಠ ಎನಿಸಿತ್ತು.

1. ಕೆಕೆಆರ್ ಎದುರು ಪಂಜಾಬ್ ತಂಡ ಯಾವುದೇ ವಿಕೆಟ್ ದಾಖಲಿಸಿದ ಗರಿಷ್ಠ ರನ್ ಜತೆಯಾಟ ಇದಾಗಿದೆ. ವೃದ್ಧಿಮಾನ್ ಸಾಹ-ಮನನ್ ವೋಹ್ರಾ (129) ಜೋಡಿ ಅಗ್ರಸ್ಥಾನದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net