

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತದ ಪದಕದಾಟ ಭರ್ಜರಿಯಿಂದ ಸಾಗುತ್ತಿದೆ. ಕಳೆದ ವಾರ (ಆ.04) ಬ್ರಿಟನ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಪುರುಷರ ಹಾಕಿ ತಂಡವು ಅದ್ಭುತ ಗೆಲುವು ದಾಖಲಿಸುವ ಮೂಲಕ ಇದೀಗ ಸೆಮಿಫೈನಲ್ಗೆ ಲಗ್ಗೆಯಿಟ್ಟಿತು. ಈಗಾಗಲೇ ಮೂರು ಪದಕಗಳನ್ನು ಗೆದ್ದಿರುವ ಭಾರತಕ್ಕೆ ಇನ್ನೊಂದು ಮೆಡಲ್ ಸನ್ನಿಹಿತದಲ್ಲಿತ್ತು. ಇದೀಗ ಆ ಆಸೆಯನ್ನು ಕಡೆಗೂ ಈಡೇರಿಸಿರುವ ಹರ್ಮನ್‌ಪ್ರೀತ್ ಸಿಂಗ್ ತಂಡ ಇಂದು ನಡೆದ ಸ್ಪೈನ್ ವಿರುದ್ಧ ರೋಚಕ ಮ್ಯಾಚ್ನಲ್ಲಿ 2-1 ಅಂತರದಿಂದ ಗೆದ್ದು, ಕಂಚಿಗೆ ಮುತ್ತಿಟ್ಟಿದೆ.
ಇದನ್ನೂ ಓದಿ: ಪ್ರಾಂತ್ಯ ಶಾಲೆಯಲ್ಲಿ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮ
ಹಾಕಿಯಲ್ಲಿ ಐತಿಹಾಸಿಕ ದಾಖಲೆ ಬರೆದಿರುವ ಭಾರತ 1972ರ ನಂತರದಲ್ಲಿ ಇದೇ ಮೊದಲ ಬಾರಿಗೆ ಬ್ಯಾಕ್ ಟು ಬ್ಯಾಕ್ ಪದಕಗಳನ್ನು ಗೆದ್ದಿರುವುದು. ಒಲಿಂಪಿಕ್ಸ್ ಹಾಕಿ ಓಟದಲ್ಲಿ ಭಾರತಕ್ಕೆ ಇದು 13ನೇ ಪದಕವಾಗಿದೆ. ಈ ದಾಖಲೆಗೆ ಕಾರಣರಾದ ಕ್ಯಾಪ್ಟನ್ ಹರ್ಮನ್‌ಪ್ರೀತ್ ಸಿಂಗ್ ತಂಡಕ್ಕೆ ಇದೀಗ ದೇಶವ್ಯಾಪಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಕಂಚು ಗೆದ್ದ ಖುಷಿಯಲ್ಲಿರುವ ತಂಡಕ್ಕೆ ದಿಗ್ಗಜ ಆಟಗಾರ, ಗೋಲ್ಕೀಪರ್ ಪಿ.ಆರ್. ಶ್ರೀಜೇಶ್ ಅವರ ವಿದಾಯ ಕಣ್ಣಂಚಲಿ ನೀರು ತರಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ 2024ರ ಪದಕದಾಟದಲ್ಲಿ ಕಂಚಿನ ಪದಕದೊಂದಿಗೆ ತಮ್ಮ ವೃತ್ತಿಜೀವನಕ್ಕೆ ಪೂರ್ಣವಿರಾಮ ಇಟ್ಟ ಪಿ.ಆರ್. ಶ್ರೀಜೇಶ್, ತಮ್ಮ ಗೋಲ್ಕೀಪಿಂಗ್ ಗ್ಲೌಸ್ ತೆಗೆದಿಟ್ಟು, ಅದಕ್ಕೆ ನಮಸ್ಕರಿಸುವ ಮೂಲಕ ಭಾವುಕ ವಿದಾಯ ಹೇಳಿದ್ದಾರೆ. ಗೌರವ ಸಲ್ಲಿಸಿ, ಎಲ್ಲರಿಗೂ ಧನ್ಯವಾದ ತಿಳಿಸಿದ ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಹಾಕಿ ಆಟಗಾರರಲ್ಲಿ ಒಬ್ಬರಾದ ಶ್ರೀಜೇಶ್ ಅವರ ನಿವೃತ್ತಿಗೆ ಇದೀಗ ಕ್ರೀಡಾ ಅಭಿಮಾನಿಗಳು ತಲೆಬಾಗಿದ್ದಾರೆ.