ಮಹಿಳಾ ಟಿ20 ವಿಶ್ವಕಪ್​: ಮೊದಲ ಪಂದ್ಯದಲ್ಲಿ ಆಸೀಸ್ ವಿರುದ್ಧ ಗೆಲುವು ಸಾಧಿಸಿದ ಟೀಂ ಇಂಡಿಯಾ

women T20 WC India wins over Aus 21 FEB 20
Published on

ಸಿಡ್ನಿ: ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಿದ್ದವು. ಸಿಡ್ನಿಯ ಶೋ ಗ್ರೌಂಡ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಟೀಂ ಇಂಡಿಯಾ 17 ರನ್​ಗಳ ಅಂತರದಲ್ಲಿ ಸೋಲಿಸಿದೆ.

ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಓಪನರ್​ಗಳಾದ ಬೆತ್​ ಮೂನೇ ಮತ್ತು ಅಲಿಸ್ಸಾ ಹೀಲಿ ಅವರ ಮೊದಲ ವಿಕೆಟ್ ಜೊತೆಯಾಟ 32 ರನ್​ಗಳೊಂದಿಗೆ ಟೀಂ ಇಂಡಿಯಾ ನೀಡಿದ್ದ 133 ರನ್​ಗಳ ಗೆಲುವಿನ ಗುರಿಯನ್ನು ಬೆನ್ನು ಹತ್ತಿತ್ತು. ಮೊದಲ ವಿಕೆಟ್ ಜೊತೆಯಾಟವನ್ನು ಟೀಂ ಇಂಡಿಯಾದ ಬೌಲರ್​ ಶಿಖಾ ಪಾಂಡೆ ಆರನೇ ಓವರ್​ನಲ್ಲಿ ಮುರಿದರು. ಆರು ರನ್ ಗಳಿಸಿದ್ದ ಮೂನೆ ಔಟಾಗುವ ಮೂಲಕ ಆಸೀಸ್ ತಂಡದ ಮೊದಲ ವಿಕೆಟ್​ ಪತನವಾಯಿತು. ನಂತರ ಹೀಲಿ ಜತೆಗೂಡಿದವರು ಮೆಗ್​ ಲ್ಯಾನ್ನಿಂಗ್​. ಇವರ ಜೊತೆಯಾಟ 23 ರನ್​ಗಳದ್ದಾಗಿತ್ತು. ಇದೇ ವೇಳೆ ರಾಜೇಶ್ವರಿ ಗಾಯಕ್ವಾಡ್ ಐದು ರನ್ ಗಳಿಸಿ ಕ್ರೀಸ್​ನಲ್ಲಿದ್ದ ಲ್ಯಾನ್ನಿಂಗ್ ಅವರನ್ನು ಪೆವಿಲಿಯನ್​ಗೆ ಅಟ್ಟಿದ್ದರು.

ಆದಾಗ್ಯೂ, ಹೀಲಿ ತನ್ನ ಆಟ ಮುಂದುವರಿಸಿ ಹತ್ತನೇ ಓವರ್​ನಲ್ಲಿ ಅರ್ಧ ಶತಕ ದಾಖಲಿಸಿದರು. 51 ರನ್​ ಗಳಿಸಿ ಕ್ರೀಸ್​ನಲ್ಲಿದ್ದ ಹೀಲಿಗೆ ಪೂನಂ ಯಾದವ್ ಪೆವಿಲಿಯನ್ ದಾರಿ ತೋರಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 67 ರನ್ ಆಗಿತ್ತು.

ನಂತರ ನಡೆದುದು ಸ್ಪಿನ್ ಮೋಡಿ. ಗೆಲುವಿಗೆ 57 ರನ್ ಅಗತ್ಯ ಇದೆ ಎನ್ನುವಾಗ ಆಸ್ಟ್ರೇಲಿಯಾ ತಂಡ ರಾಚೆಲ್ ಹೇಯ್ನ್ಸ್ (6), ಎಲ್ಲಿಸ್​ ಪೆರ್ರಿ (0) ಅವರ ವಿಕೆಟ್​ಗಳನ್ನು ಕಳೆದುಕೊಂಡಿತು. ಅಶ್ಲೇಗ್​ ಗಾರ್ಡನರ್ ಒಂದು ಬದಿಯಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದರು. ಆದರೆ, ಇನ್ನೊಂದು ಬದಿಯಲ್ಲಿ ವಿಕೆಟ್​ಗಳು ಉದುರುತ್ತಿದ್ದ ಕಾರಣ ಅವರ ಹೋರಾಟ ಯಶ ಕಾಣಲಿಲ್ಲ. ಕೊನೆಗೆ 17 ರನ್ ಗಳ ಅಂತರದ ಸೋಲನ್ನು ಆಸೀಸ್ ತಂಡ ಕಂಡಿತು.

ಇದಕ್ಕೂ ಮುನ್ನ, ಮೊದಲ ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತ್ತು. ಇದರಲ್ಲಿ ದೀಪ್ತಿ ಶರ್ಮಾ ಅವರ ಅಜೇಯ 49 ರನ್ ಸೇರಿದೆ. ಟೀಂ ಇಂಡಿಯಾದ ಓಪನರ್​ಗಳಾದ ಸ್ಮೃತಿ ಮಂದಾನಾ ಮತ್ತು ಶಫಾಲಿ ವರ್ಮಾ ಮೊದಲ ನಾಲ್ಕು ಓವರ್​ಗಳಲ್ಲಿ 40 ರನ್ ಪೇರಿಸಿದ್ದರು. 16 ವರ್ಷದ ಶರ್ಮಾ ಆಸೀಸ್ ಸ್ಪಿನ್ನರ್​ಗಳ ಬೆವರಿಳಿಸಿದ್ದು, ಬಾಲ್​ಗಳನ್ನು ಬೌಂಡರಿ ಗೆರೆ ದಾಟಿಸಿ 29 ರನ್ ಗಳಿಸಿದ್ದರು. ಸ್ಮೃತಿ ಮಂದಾನಾ ಐದನೇ ಓವರ್​ನಲ್ಲಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು. ನಂತರ ಶಫಾಲಿ ವರ್ಮಾ ಕೂಡಾ ಪೆವಿಲಿಯನ್ ಹಾದಿ ಹಿಡಿದರು. ಆಗ ಭಾರತದ ಸ್ಕೋರ್ ಎರಡು ವಿಕೆಟ್ ನಷ್ಟಕ್ಕೆ 43 ರನ್​. ನಂತರ ಕ್ರೀಸ್​ನಲ್ಲಿದ್ದ ಜೆಮ್ಮಿಯಾ ರೋಡ್ರಿಗ್ರಸ್​ ಮತ್ತು ದೀಪ್ತಿ ಶರ್ಮಾ ನಾಲ್ಕನೇ ವಿಕೆಟ್​ಗೆ 53 ರನ್ ಕಲೆಹಾಕಿದ್ದರು.

ಸಂಕ್ಷಿಪ್ತ ಸ್ಕೋರ್​: ಭಾರತ 132/4( ದೀಪ್ತಿ ಶರ್ಮಾ 49​, ಶಫಾಲಿ ವರ್ಮಾ 29, ಜೆಸ್​ ಜೊನಾಸ್ಸೆನ್ 2-24)

ಆಸೀಸ್ ತಂಡ 115/10( ಅಲಿಸ್ಸಾ ಹೀಲಿ 51, ಆಶ್ಲೇಘ್ ಗಾರ್ಡನರ್​ 34, ಪೂನಂ ಯಾದವ್ 4-19)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net