

ನವದೆಹಲಿ: ಟಿ20 ವಿಶ್ವಕಪ್ನ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಬರೋಬ್ಬರಿ 17 ವರ್ಷಗಳ ಬಳಿಕ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾಯಕ್ಕೆ ಪ್ರಧಾನಿ ಮೋದಿ ಅವರು ಶನಿವಾರ ರಾತ್ರಿ 11.40ರ ವೇಳೆಗೆ ಲೈವ್ ಬಂದು ಅಭಿನಂದನೆ ಸಲ್ಲಿಸಿದ್ದಾರೆ.
ಈ ಗೆಲುವಿನಿಂದ ಭಾರತದ ಗಲ್ಲಿ ಗಲ್ಲಿಗಳಲ್ಲಿ 140 ಕೋಟಿ ಭಾರತೀಯರು ಸಂಭ್ರಮಿಸಿಸುತ್ತಿದ್ದಾರೆ. ಈ ಸರಣಿಯಲ್ಲಿ ಒಂದು ಪಂದ್ಯವನ್ನು ಸೋಲದೆ ಪ್ರಶಸ್ತಿ ಗೆದ್ದಿರುವುದು ಸಣ್ಣ ಸಾಧನೆಯಲ್ಲ. ನಾನು ತಂಡದ ಪ್ರತಿಯೊಬ್ಬ ಆಟಗಾರ ಮತ್ತು ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿಯ ಅಬ್ಬರದ ಅರ್ಧಶತಕ ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವು ಹಾಗೂ ಕೊನೇ ಕ್ಷಣದ ರೋಚಕ ಹೋರಾಟ ಫಲವಾಗಿ ಭಾರತ ತಂಡ ವಿಶ್ವಕಪ್ ಗೆದ್ದು ಬೀಗಿದೆ.
ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ಗಳ ರೋಚಕ ಗೆಲುವು ದಾಖಲಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು. ಭಾರತದ ಪಾಲಿಗೆ ಇದು ಸ್ಮರಣೀಯ ಟ್ರೋಫಿ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಅಪೇಕ್ಷಿತ ಚಾಂಪಿಯನ್ ಪಟ್ಟ. ಅತ್ತ ದಕ್ಷಿಣ ಆಫ್ರಿಕಾ ತಂಡ ತನ್ನ ಚೋಕರ್ಸ್ ಹಣೆಪಟ್ಟಿಯನ್ನು ಮತ್ತಷ್ಟು ದಿನ ಕಟ್ಟಿಕೊಳ್ಳುವಂತಾಯಿತು. 4 ದಶಕಗಳ ತನ್ನ ವಿಶ್ವ ಕಪ್ ಅಭಿಯಾನದಲ್ಲಿ ಒಂದೇ ಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗದೇ ನಿರಾಸೆ ಎದುರಿಸಿತು.