ವಿನೇಶ್ ಫೋಗಟ್ ಅನರ್ಹ; ಸೂಕ್ತ ಕ್ರಮಕ್ಕೆ ಪ್ರಧಾನಿ ಮೋದಿ ಸೂಚನೆ.. ಮನ್ಸುಖ್​ ಮಾಂಡವಿಯಾ ಹೇಳಿದಿಷ್ಟು..

Untitled-design-51-1
Published on

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿರುವ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, ವಿನೇಶ್ ಅವರ ತೂಕ 50 ಕೆಜಿ 100 ಗ್ರಾಂ ಇದ್ದು, ಆಕೆಯನ್ನು ಅನರ್ಹಗೊಳಿಸಲಾಗಿದೆ. ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ​​ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದೆ ಎಂದು ಹೇಳಿದರು.

ವಿನೇಶ್ ಅವರು 50 ಕೆ.ಜಿ. ವಿಭಾಗದಲ್ಲಿ ಆಡುತ್ತಿದ್ದರು. UWW ನ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ, ಎಲ್ಲಾ ವಿಭಾಗಗಳಾದ್ಯಂತ ಕ್ರೀಡಾಪಟುಗಳ ತೂಕವನ್ನು ಪ್ರತಿದಿನ ಬೆಳಗ್ಗೆ ಅಳೆಯಲಾಗುತ್ತದೆ. ವಿನೇಶ್ ಅವರ ತೂಕ 50 ಕೆಜಿ ಮತ್ತು 100 ಗ್ರಾಂ ಎಂದು ಕಂಡುಬಂದಿದೆ. ಅದರ ನಂತರ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಮಾಂಡವಿಯಾ ತಿಳಿಸಿದರು.

ಪ್ಯಾರಿಸ್ ಒಲಿಂಪಿಕ್ಸ್‌ನ ಸ್ಪರ್ಧೆಯಿಂದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಹೊರಗಿಡುವ ವಿಷಯದಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಒಲಿಂಪಿಕ್ ಸಂಸ್ಥೆಗೆ (ಐಒಎ) ಸೂಚಿಸಿದ್ದಾರೆ. ಐಒಎ ಮುಖ್ಯಸ್ಥೆ ಪಿಟಿ ಉಷಾ ಪ್ಯಾರಿಸ್‌ನಲ್ಲಿದ್ದು, ಪ್ರಧಾನಿ ಅವರೇ ಅವರೊಂದಿಗೆ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಪ್ರಧಾನಿ ಪಿ.ಟಿ.ಉಷಾ ಅವರಿಗೆ ತಿಳಿಸಿದ್ದಾರೆ ಎಂದು ಹೇಳಿದರು.

ವಿನೇಶ್ ಫೋಗಟ್ ಅವರಿಗೆ ಸರ್ಕಾರವು ಎಲ್ಲಾ ರೀತಿಯ ಕ್ರೀಡಾ ಸೌಲಭ್ಯಗಳನ್ನು ಮತ್ತು ತರಬೇತಿಯನ್ನು ನೀಡಿದೆ. ಪ್ಯಾರಿಸ್ ಒಲಿಂಪಿಕ್ಸ್​​ಗಾಗಿ ವಿನೇಶ್​​ಗೆ 70 ಲಕ್ಷದ 45 ಸಾವಿರದ 775 ರೂಪಾಯಿಗಳ ನೆರವು ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಲೈಂಗಿಕ ಕಿರುಕುಳದ ಆರೋಪದ ಮೇಲೆ ಮಾಜಿ ಕುಸ್ತಿ ಫೆಡರೇಶನ್ ಮುಖ್ಯಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಫೋಗಟ್, ಒಲಿಂಪಿಕ್ಸ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಇತಿಹಾಸ ನಿರ್ಮಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net