

ಬೆಂಗಳೂರು: ಮುಂಬರುವ ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತದ ಮಹಿಳೆಯರ ತಂಡವನ್ನು ಪ್ರಕಟಿಸಲಾಗಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಗಮನಸೆಳೆದಿರುವ ಕರ್ನಾಟಕದ ಯುವ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಆಸೀಸ್ ವಿರುದ್ಧ ಟಿ20 ಜತೆಗೆ ಏಕದಿನ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಆಯ್ಕೆಗಾರರು ಹಲವು ಯುವ ಸ್ಪಿನ್ನರ್ಗಳಿಗೆ ಅವಕಾಶ ಕಲ್ಪಿಸಿರುವುದರಿಂದ ರಾಜ್ಯದ ಅನುಭವಿ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಹೊರಬಿದ್ದಿದ್ದಾರೆ. 20 ವರ್ಷದ ಎಡಗೈ ಸ್ಪಿನ್ನರ್ ಮನ್ನತ್ ಕಶ್ಯಪ್, ಸೈಕಾ ಇಶಾಕ್ ಮತ್ತು ಟಿಟಾಸ್ ಸಾಧು ಕೂಡ ಏಕದಿನ ತಂಡಕ್ಕೆ ಹೊಸಮುಖಗಳಾಗಿದ್ದಾರೆ.
ಕಳೆದ ಬಾಂಗ್ಲಾದೇಶ ಪ್ರವಾಸಕ್ಕೆ ಸ್ಥಾನ ವಂಚಿತರಾಗಿದ್ದ ರೇಣುಕಾ ಸಿಂಗ್ ಮತ್ತು ರಿಚಾ ಘೋಷ್ ಈ ಬಾರಿ ಏಕದಿನ ತಂಡಕ್ಕೆ ಮರಳಿದ್ದಾರೆ. ರಿಚಾ ಬದಲಿಗೆ ಸ್ಥಾನ ಪಡೆದಿದ್ದ ಉಮಾ ಛೇಟ್ರಿ ಒಂದೂ ಪಂದ್ಯವಾಡುವ ಅವಕಾಶವಿಲ್ಲದೆ ಹೊರಬಿದ್ದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 1-2ರಿಂದ ಸೋತಿದ್ದ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಏಕದಿನ ತಂಡದಲ್ಲಿ ಪ್ರಮುಖವಾಗಿ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಲಾಗಿದ್ದು, ಅಂಜಲಿ ಸರ್ವಾನಿ, ಬಿ. ಅನುಷಾ, ಮೇಘಾ ಸಿಂಗ್, ರಿಷಿ ಕನೋಜಿಯಾ, ಮೋನಿಕಾ ಪಟೇಲ್ ಜತೆಗೆ ಆಲ್ರೌಂಡರ್ಗಳಾದ ಪ್ರಿಯಾ ಪೂನಿಯಾ, ದೇವಿಕಾ ವೈದ್ಯ ಕೊಕ್ ಪಡೆದಿದ್ದಾರೆ.
ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಪರ ಮಿಂಚಿದ್ದ ಶ್ರೇಯಾಂಕಾ ಪಾಟೀಲ್ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ಕೊನೇ ಪಂದ್ಯದಲ್ಲಿ 3 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.
ಏಕದಿನ ತಂಡ: ಹರ್ಮಾನ್ಪ್ರೀತ್ ಕೌರ್ (ನಾಯಕಿ), ಸ್ಮ$ತಿ ಮಂದನಾ (ಉಪನಾಯಕಿ), ಜೆಮೀಮಾ ರೋಡ್ರಿಗಸ್, ಶೆಾಲಿ ವರ್ಮ, ದೀಪ್ತಿ ಶರ್ಮ, ಯಸ್ತಿಕಾ ಭಾಟಿಯಾ (ವಿ.ಕೀ), ರಿಚಾ ಘೊಷ್ (ವಿ.ಕೀ), ಅಮನ್ಜೋತ್ ಕೌರ್, ಶ್ರೇಯಾಂಕಾ ಪಾಟೀಲ್, ಮನ್ನತ್ ಕಶ್ಯಪ್, ಸೈಕಾ ಇಶಾಕ್, ರೇಣುಕಾ ಸಿಂಗ್, ಟಿಟಾಸ್ ಸಾಧು, ಪೂಜಾ ವಸ್ತ್ರಾಕರ್, ಸ್ನೇಹಾ ರಾಣಾ, ಹರ್ಲೀನ್ ಡಿಯೋಲ್.
ಟಿ20 ತಂಡ: ಹರ್ಮಾನ್ಪ್ರೀತ್ ಕೌರ್ (ನಾಯಕಿ), ಸ್ಮ$ತಿ ಮಂದನಾ (ಉಪನಾಯಕಿ), ಜೆಮೀಮಾ ರೋಡ್ರಿಗಸ್, ಶೆಾಲಿ ವರ್ಮ, ದೀಪ್ತಿ ಶರ್ಮ, ಯಸ್ತಿಕಾ ಭಾಟಿಯಾ (ವಿ.ಕೀ), ರಿಚಾ ಘೊಷ್ (ವಿ.ಕೀ), ಅಮನ್ಜೋತ್ ಕೌರ್, ಶ್ರೇಯಾಂಕಾ ಪಾಟೀಲ್, ಮನ್ನತ್ ಕಶ್ಯಪ್, ಸೈಕಾ ಇಶಾಕ್, ರೇಣುಕಾ ಸಿಂಗ್, ಟಿಟಾಸ್ ಸಾಧು, ಪೂಜಾ ವಸ್ತ್ರಾಕರ್, ಕನಿಕಾ ಅಹುಜಾ, ಮಿನ್ನು ಮಣಿ.
ವೇಳಾಪಟ್ಟಿ: ಏಕದಿನ ಪಂದ್ಯಗಳು: ಡಿಸೆಂಬರ್ 28, 30, ಜನವರಿ 2; ಎಲ್ಲಿ: ವಾಂಖೆಡೆ ಕ್ರೀಡಾಂಗಣ, ಮುಂಬೈ; ಆರಂಭ: ಮಧ್ಯಾಹ್ನ 1.30; ಟಿ20 ಪಂದ್ಯಗಳು: ಜನವರಿ 5, 7, 9; ಎಲ್ಲಿ: ಡಿವೈ ಪಾಟೀಲ್ ಸ್ಟೇಡಿಯಂ, ನವಿ ಮುಂಬೈ; ಆರಂಭ: ರಾತ್ರಿ 7.00; ನೇರಪ್ರಸಾರ: ಜಿಯೋಸಿನಿಮಾ
.