ಒಂದೂ ಎಸೆತವಿಲ್ಲದೆ 2ನೇ ದಿನದಾಟ ರದ್ದು: ಭಾರತಕ್ಕೆ ಡಬ್ಲ್ಯುಟಿಸಿ ಫೈನಲ್ ರೇಸ್‌ನಲ್ಲಿ ಹಿನ್ನಡೆ?

New-Project-2-9
Published on

ಕಾನ್ಪುರ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದ ಆಟ ನಿರಂತರ ಮಳೆಯಿಂದಾಗಿ ಸಂಪೂರ್ಣವಾಗಿ ಆಹುತಿಯಾಗಿದೆ. ಶನಿವಾರ ಸುರಿದ ಭಾರಿ ಮಳೆ ಹಾಗೂ ಒದ್ದೆ ಮೈದಾನದಿಂದ ಎರಡನೇ ದಿನ ಒಂದೂ ಎಸೆತವಿಲ್ಲದೆ ದಿನದಾಟವನ್ನು ರದ್ದುಗೊಳಿಸಲಾಯಿತು.

ಬೆಳಗ್ಗೆ ಆರಂಭಗೊಂಡ ತುಂತುರು ಮಳೆ ನಂತರ ಜೋರಾಗಿ ಸುರಿಯಲಾರಂಭಿಸಿತು. 11.15ರ ವೇಳೆಗೆ ಮಳೆ ಬಿಡುವು ನೀಡಿದ ಬಳಿಕ ಮೂರು ಸೂಪರ್ ಸಾಪರ್‌ಗಳ ನೆರವಿನಿಂದ ಮೈದಾನದಲ್ಲಿನ ನೀರು ಹೊರತೆಗೆಯಲು ಗ್ರೌಂಡ್ಸ್‌ಮನ್‌ಗಳು ಹರಸಾಹಸಪಟ್ಟರು. ಮಳೆ ಜತೆಗೆ ಮಂದಬೆಳಕು ಅಡಚಣೆ ತಂದಿತು. ಪರಿಸ್ಥಿತಿ ಸುಧಾರಣೆ ಕಾಣದೆ ದಿನದ ಆಟ ಅಸಾಧ್ಯ ಎಂಬುದನ್ನು ಅರಿತ ಎರಡು ತಂಡಗಳ ಆಟಗಾರರು ಮಧ್ಯಾಹ್ನದ ವೇಳೆಗೆ ಹೋಟೆಲ್‌ಗೆ ಹಿಂತಿರುಗಿದರು. 2.15ಕ್ಕೆ ಅಧಿಕೃತವಾಗಿ ಅಂಪೈರ್‌ಗಳು ದಿನದ ಆಟವನ್ನು ರದ್ದುಗೊಳಿಸಿರುವುದಾಗಿ ೋಷಿಸಿದರು. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ನಗರದಲ್ಲಿ ಭಾನುವಾರವೂ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಸೋಮವಾರ ಮತ್ತು ಮಂಗಳವಾರ ವರುಣ ಬಿಡುವು ನೀಡಲಿದೆ ಎನ್ನಲಾಗಿದೆ. ಕೊನೆಯ ಎರಡು ದಿನ ಆಟ ನಡೆದರೂ, ಪಂದ್ಯ ಬಹುತೇಕ ಡ್ರಾದತ್ತ ಸಾಗಲಿದೆ. ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಂತ್ಯಕ್ಕೆ ಬಾಂಗ್ಲಾದೇಶ 35 ಓವರ್‌ಗಳಲ್ಲಿ 3 ವಿಕೆಟ್‌ಗೆ 107 ರನ್‌ಗಳಿಸಿದೆ.

ಡಬ್ಲ್ಯುಟಿಸಿ ಫೈನಲ್ ರೇಸ್‌ನಲ್ಲಿ ಹಿನ್ನಡೆ? : ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) ಸತತ 3ನೇ ಬಾರಿಗೆ ಫೈನಲ್‌ಗೇರುವ ಹಂಬಲದಲ್ಲಿರುವ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಡ್ರಾ ಸಾಧಿಸಿದರೆ ತುಸು ಹಿನ್ನಡೆಯಾಗುವ ನಿರೀಕ್ಷೆಯಿದೆ.

2023-25ರ ಹಾಲಿ ಆವೃತ್ತಿಯಲ್ಲಿ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 2ರಲ್ಲಿ ಸೋತು, ಒಂದು ಡ್ರಾದೊಂದಿಗೆ ಶೇ. 71.67 ಅಂಕ ಕಲೆಹಾಕಿರುವ ಭಾರತ ತಂಡ ಸದ್ಯ ಅಗ್ರಸ್ಥಾನದಲ್ಲಿದೆ. ಬಾಂಗ್ಲಾ ಎದುರು ಭಾರತ 2-0ಯಿಂದ ಗೆದ್ದರೆ, ಉಳಿದ ಎಂಟು ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿದರೆ ಫೈನಲ್ ಸ್ಥಾನ ಖಾತ್ರಿಪಡಿಸಿಕೊಳ್ಳಲಿದೆ.

ಒಂದು ವೇಳೆ ಮಳೆಯಿಂದ 2ನೇ ಟೆಸ್ಟ್ ಡ್ರಾಗೊಂಡರೆ ಮುಂದಿನ 8 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ದಾಖಲಿಸುವ ಒತ್ತಡಕ್ಕೆ ರೋಹಿತ್ ಶರ್ಮ ಸಿಲುಕಲಿದೆ. ಜತೆಗೆ ಇತರ ತಂಡಗಳ ಫಲಿತಾಂಶವೂ ವರದಾನವಾಗಬೇಕಿದೆ. ಜತೆಗೆ ತವರಿನಲ್ಲಿ ನ್ಯೂಜಿಲೆಂಡ್ ಎದುರು 3-0ಯಿಂದ ಸರಣಿ ಗೆದ್ದರೂ, ಐದು ಪಂದ್ಯಗಳ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ಎದುರು 2 ಪಂದ್ಯ ಜಯಿಸುವ ಒತ್ತಡ ಎದುರಿಸಬೇಕಾಗುತ್ತದೆ. ಅಂಕಪಟ್ಟಿಯ ಅಗ್ರ 2 ತಂಡಗಳು ಡಬ್ಲ್ಯುಟಿಸಿ ಫೈನಲ್‌ನಲ್ಲಿ ಹೋರಾಡಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net