ತಲೈವಾಸ್​ಗೆ ತಲೆಬಾಗಿದ ಜೈಪುರ: ಪಲ್ಟಾನ್-ಹರಿಯಾಣ ಪಂದ್ಯ ರೋಚಕ ಟೈ

Tamil Tal
Published on

ಪುಣೆ: ರೈಡರ್ ನರೇಂದರ್(13) ಅಮೋಘ ನಿರ್ವಹಣೆ ನೆರವಿನಿಂದ ತಮಿಳ್ ತಲೈವಾಸ್ ತಂಡ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಮಾಜಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 27-38 ಅಂತರದಿಂದ ಸೋಲಿಸಿದೆ. ಬೆಂಗಳೂರು ಚರಣದ ಕೊನೇ 2 ಪಂದ್ಯಗಳಲ್ಲಿ ಸೋತಿದ್ದ ತಲೈವಾಸ್ ತಂಡ ಪುಣೆ ಚರಣದ ಮೊದಲ ಪಂದ್ಯದಲ್ಲೇ ಗೆಲುವಿನ ಹಾದಿಗೆ ಮರಳಿತು.

ಬಾಲೆವಾಡಿಯ ಶ್ರೀ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್​ನಲ್ಲಿ ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ ಮೊದಲಾರ್ಧದಲ್ಲೇ ಸಾಧಿಸಿದ ಭಾರಿ ಮುನ್ನಡೆಯೊಂದಿಗೆ ಗೆಲುವಿನ ನಗೆ ಬೀರಿತು. ತಲೈವಾಸ್ ಆರಂಭಿಕ 10 ನಿಮಿಷದಲ್ಲೇ ಜೈಪುರ ತಂಡವನ್ನು ಆಲೌಟ್ ಬಲೆಗೆ ಬೀಳಿಸಿತು. ಮೊದಲಾರ್ಧದ ಮುಕ್ತಾಯಕ್ಕೆ 20-8 ಅಂಕಗಳ ಅಂತರದಿಂದ ತಲೈವಾಸ್ ತಂಡ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ 12 ಅಂಕಗಳ ಮುನ್ನಡೆಯೊಂದಿಗೆ ತಲೈವಾಸ್ ರಕ್ಷಣಾತ್ಮಕ ಆಟ ಪ್ರದರ್ಶಿಸಿತು. ದ್ವಿತೀಯಾರ್ಧದಲ್ಲಿ ದಿಟ್ಟ ಪ್ರದರ್ಶನ ತೋರಿದ ಜೈಪುರ ಎದುರಾಳಿ ತಲೈವಾಸ್ ತಂಡವನ್ನು 36ನೇ ನಿಮಿಷದಲ್ಲಿ ಆಲೌಟ್ ಮಾಡಿ ತಿರುಗೇಟು ನೀಡುವ ಮೂಲಕ ಸೋಲಿನ ಅಂತರವನ್ನು ತಗ್ಗಿಸಿತು. ತಲೈವಾಸ್ ಪರ ಟ್ಯಾಕಲಿಂಗ್​ನಲ್ಲಿ ಹಿಮಾಂಶು 4 ಅಂಕಗಳಿಸಿದರು. ಜೈಪುರ ಪರ ರೈಡರ್ ಅರ್ಜುನ್ ದೇಶವಾಲ್ (9) ಏಕಾಂಗಿ ಹೋರಾಟ ನಡೆಸಿದರು.

2ನೇ ಪಂದ್ಯ ರೋಚಕ ಟೈ
ದಿನದ ಎರಡನೇ ಪಂದ್ಯದಲ್ಲಿ ಅತಿಥೇಯ ಪುಣೇರಿ ಪಲ್ಟಾನ್ ಹಾಗೂ ಹರಿಯಾಣ ಸ್ಟೀಲರ್ಸ್ ನಡುವಿನ ಪಂದ್ಯ ರೋಚಕ ಟೈ ಸಾಧಿಸಿತು. ಮೊದಲಾರ್ಧ ಮುಕ್ತಾಯಕ್ಕೆ ತವರು ಅಭಿಮಾನಿಗಳ ಬೆಂಬಲದೊಂದಿಗೆ 13-10 ಅಲ್ಪ ಮುನ್ನಡೆ ಸಾಧಿಸಿದ ಪಲ್ಟಾನ್ ದ್ವಿತೀಯಾರ್ಧದಲ್ಲಿ ಹರಿಯಾಣ ತಂಡವನ್ನು ಆಲೌಟ್ ಮಾಡಿ ಮೂಲಕ ಮೇಲುಗೈ ಸಾಧಿಸಿತು. ಹಿನ್ನಡೆ ನಡುವೆಯೂ ಅತಿಥೇಯರಿಗೆ ತಿರುಗೇಟು ನೀಡಿದ ಹರಿಯಾಣ 35ನೇ ನಿಮಿಷದಲ್ಲಿ ಪಲ್ಟಾನ್ ತಂಡವನ್ನು ಆಲೌಟ್ ಮಾಡಿ ಸಮಬಲ ಸಾಧಿಸಿ ಅಂತಿಮ ಕ್ಷಣದಲ್ಲಿ ಕಂಬ್ಯಾಕ್ ಮಾಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net