ಹಾಲಿ ವರ್ಷ ಪ್ರೊ ಕಬಡ್ಡಿ ಲೀಗ್​ ನಡೆಯಲ್ಲ!

ನೇರಪ್ರಸಾರ ಹಕ್ಕು ಬಿಕ್ಕಟ್ಟು ಕಾರಣ
kabaddi
ಪ್ರೊ ಕಬಡ್ಡಿ ಲೀಗ್ ಪಂದ್ಯದ ನೋಟ.ಸಂಗ್ರಹ ಚಿತ್ರ
Published on: 

ನವದೆಹಲಿ: ಹಾಲಿ ವರ್ಷ ಏಷ್ಯನ್​ ಗೇಮ್ಸ್​ ಮತ್ತು ಕಾಮನ್ವೆಲ್ತ್​ ಕಬಡ್ಡಿ ಚಾಂಪಿಯನ್​ಷಿಪ್​ನಿಂದಾಗಿ ಪ್ರೊ ಕಬಡ್ಡಿ ಲೀಗ್​ ವಿಳಂಬಗೊಂಡಿದೆ ಎಂದೇ ಭಾವಿಸಲಾಗಿತ್ತು. ಆದರೆ ಇದೀಗ, ಹಾಲಿ ವರ್ಷ ಪ್ರೊ ಕಬಡ್ಡಿ ಲೀಗ್​ ಟೂರ್ನಿಯೇ ನಡೆಯುವುದಿಲ್ಲ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಟೂರ್ನಿಯ ನೇರಪ್ರಸಾರ ಹಕ್ಕು ಸಮಸ್ಯೆಯಿಂದಾಗಿ ಹಾಲಿ ವರ್ಷದ ಟೂರ್ನಿ ಮುಂದೂಡಿಕೆಯಾಗಿದೆ ಎಂದು ವರದಿಯಾಗಿದೆ.

ಜಿಯೋಸ್ಟಾರ್​ (ಹಿಂದಿನ ಸ್ಟಾರ್​ ಇಂಡಿಯಾ) ಪ್ರೊ ಕಬಡ್ಡಿ ಲೀಗ್​ ಟೂರ್ನಿಯ ಪ್ರಸಾರ ಹಕ್ಕು ಹೊಂದಿತ್ತು ಮತ್ತು ಕಳೆದ ವರ್ಷ ಇದರ ಅವಧಿ ಕೊನೆಗೊಂಡಿತ್ತು. 2021ರಲ್ಲಿ ಟೂರ್ನಿಯ 5 ವರ್ಷಗಳ ಪ್ರಸಾರ ಹಕ್ಕು 905 ಕೋಟಿ ರೂ.ಗಳಿಗೆ ಮಾರಾಟವಾಗಿತ್ತು. ಆದರೆ ಈ ಬಾರಿ ಪ್ರಸಾರ ಹಕ್ಕು ನವೀಕರಣಗೊಳಿಸಲು ಜಿಯೋಸ್ಟಾರ್​ ಈ ಹಿಂದಿನ ಮೊತ್ತದ ಅರ್ಧದಷ್ಟನ್ನು ಮಾತ್ರ ನೀಡುವುದಾಗಿ ತಿಳಿಸಿತ್ತು. ಆದರೆ ಇದನ್ನು ಟೂರ್ನಿ ಸಂಟಿಸುವ ಮಾಷಲ್​ ಸ್ಪೋರ್ಟ್ಸ್​ ಸಂಸ್ಥೆ ಮತ್ತು ಎಲ್ಲ ತಂಡಗಳ ಮಾಲೀಕರು ಒಪ್ಪಿಕೊಂಡಿಲ್ಲ. ಇದರಿಂದ ಬಿಕ್ಕಟ್ಟು ಎದುರಾಗಿದ್ದು, ಇದನ್ನು ಬಗೆಹರಿಸಲು ಹೆಚ್ಚಿನ ಸಮಯ ಬೇಕಾಗಿದೆ. ಇದರಿಂದಾಗಿ ಟೂರ್ನಿಯನ್ನು 2027ರ ಜೂನ್​ ತನಕ ಮುಂದೂಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರೊ ಕಬಡ್ಡಿ ಲೀಗ್​ 2014ರಲ್ಲಿ ಆರಂಭಗೊಂಡಿತ್ತು ಮತ್ತು ಇದುವರೆಗೆ 12 ಆವೃತ್ತಿಗಳು ನಡೆದಿವೆ. ಒಟ್ಟು 12 ತಂಡಗಳು ಟೂರ್ನಿಯಲ್ಲಿ ಆಡುತ್ತವೆ. ಮೊದಲ ಆವೃತ್ತಿಯಿಂದಲೂ ಸ್ಟಾರ್​ ಸ್ಪೋರ್ಟ್ಸ್​ ಟೂರ್ನಿಯ ಪಂದ್ಯಗಳ ನೇರಪ್ರಸಾರ ಮಾಡುತ್ತ ಬಂದಿದೆ.