

ಮುಂಬೈ: ಭಾರತ ಹಾಗೂ ಪ್ರವಾಸಿ ಶ್ರೀಲಂಕಾ ತಂಡಗಳ ನಡುವಿನ ಗುವಾಹಟಿ ಟಿ20 ಪಂದ್ಯ ಒಂದೂ ಎಸೆತ ಕಾಣದೆ ರದ್ದಾಗಿದ್ದು, ಬಿಸಿಸಿಐನ ಕಣ್ಣು ಕೆಂಪಗಾಗುವಂತೆ ಮಾಡಿದೆ. ಭಾರಿ ಮಳೆಯಿಂದ ರಕ್ಷಿಸುವ ಸಲುವಾಗಿ ಪಿಚ್ನ ಮೇಲೆ ಹಾಕಲಾಗಿದ್ದ ಕವರ್ಸ್ ತೂತಾಗಿದ್ದರಿಂದ ನೀರು ಸೋರಿಕೆಯಾಗಿ ಪಂದ್ಯದ ಪಿಚ್ ಹಾಳಾಗಿತ್ತು. ಈ ಕುರಿತಂತೆ ಬಿಸಿಸಿಐ ಮುಖ್ಯ ಕ್ಯುರೇಟರ್ ಆಶಿಶ್ ಭೌಮಿಕ್ರ ವರದಿಯನ್ನು ಕೇಳಿದೆ.
ಪಿಚ್ ಒಣಗಿಸುವ ಸಲುವಾಗಿ ಮೈದಾನದ ಸಿಬ್ಬಂದಿ ವಾಕ್ಯುಮ್ ಕ್ಲೀನರ್, ಸ್ಟೀಮ್ ಐರನ್ ಕೊನೆಗೆ ಹೇರ್ ಡ್ರೖೆಯರ್ಅನ್ನೂ ಬಳಸಿದ್ದರು. ಅದರಲ್ಲೂ ಹೇರ್ ಡ್ರೖೆಯರ್ ಬಳಸಿದ್ದು, ಅಸ್ಸಾಂ ಕ್ರಿಕೆಟ್ ಸಂಸ್ಥೆ (ಎಸಿಎ) ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೀಡಾಗುವಂತೆ ಮಾಡಿದೆ. ಪ್ರಸ್ತುತ ದಿನದಲ್ಲಿ ಕವರ್ಸ್ನಿಂದ ನೀರು ಸೋರಿಕೆಯಾಗಿ ಪಂದ್ಯ ರದ್ದಾಗುತ್ತದೆ ಎನ್ನುವುದನ್ನು ನಂಬಲೂ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ವೇಗಿ ಜಹೀರ್ ಖಾನ್ ಹೇಳಿದ್ದಾರೆ.
ಹೊಸ ಕ್ರಿಕೆಟ್ ಸಂಸ್ಥೆ ಹಾಗೂ ಅಲ್ಲಿನ ಸಿಬ್ಬಂದಿಗೆ ಹೆಚ್ಚಿನ ಅನುಭವವಿಲ್ಲ. ಅದಲ್ಲದೆ, ಮುಖ್ಯ ಕ್ಯುರೇಟರ್ ಆಶಿಶ್ ಭೌಮಿಕ್ ಹಾಗೂ ಸಿಇಒ ರಾಹುಲ್ ಜೋಹ್ರಿ ಕೂಡ ಪಂದ್ಯಕ್ಕಾಗಿ ಹೆಚ್ಚಿನ ಸಿದ್ಧತೆ ನಡೆಸಿದಂತೆ ಅನಿಸಿಲ್ಲ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಮಾನ್ಯವಾಗಿ ಮಳೆಯಾದಾಗ ಮೈದಾನದ ಹೊರ ಆವರಣ ಒದ್ದೆಯಾಗಿದೆ ಎನ್ನುವ ಕಾರಣಕ್ಕೆ ಪಂದ್ಯ ರದ್ದಾಗುತ್ತದೆ. ಆದರೆ, ಗುವಾಹಟಿಯಲ್ಲಿ ಹೊರ ಆವರಣ ಸಂಪೂರ್ಣವಾಗಿ ಒಣಗಿದ್ದರೆ ಪಿಚ್ ಒದ್ದೆಯಾಗಿತ್ತು.
ಆಟಗಾರರು 9 ಗಂಟೆಗೆ ಮೈದಾನ ತೊರೆದಿದ್ದರು: ಭಾನುವಾರದ ಪಂದ್ಯಕ್ಕಾಗಿ ಅಂಪೈರ್ಗಳು ಹಾಗೂ ಮ್ಯಾಚ್ ರೆಫ್ರಿಗಳು ರಾತ್ರಿ 9.30ಕ್ಕೆ ಪಿಚ್ ಪರಿಶೀಲನೆ ಮಾಡಿದ್ದರು. ಆದರೆ, 9 ಗಂಟೆಗೆ ವೇಳೆಗಾಗಲೇ ಆಟಗಾರರು ಮೈದಾನ ತೊರೆದಿದ್ದರು ಎಂದು ಅಸ್ಸಾಂ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. 9.30ಕ್ಕೆ ಪಿಚ್ ಪರಿಶೀಲನೆ ನಡೆದ 24 ನಿಮಿಷಗಳ ಬಳಿಕ ಪಂದ್ಯವನ್ನು ಅಧಿಕೃತವಾಗಿ ರದ್ದು ಮಾಡಲಾದ ಘೋಷಣೆ ಮಾಡಲಾಗಿತ್ತು. ಎಲ್ಲ ಆಟಗಾರರು 9 ಗಂಟೆಗೆ ಸ್ಟೇಡಿಯಂ ತೊರೆದ ಬಳಿಕ, 9.30ಕ್ಕೆ ಪಿಚ್ ಪರಿಶೀಲನೆ ಮಾಡಿದ್ದು ಯಾಕೆ ಎನ್ನುವುದು ನನಗೀಗಲೂ ಅರ್ಥವಾಗಿಲ್ಲ ಎಂದು ಹೇಳಿದ್ದಾರೆ. -ಏಜೆನ್ಸೀಸ್