ASIAN GAMES: ಕುರಾಶ್​ನಲ್ಲಿ ಪಿಂಕಿ ಕಂಚಿನ ಇತಿಹಾಸ

ದೆಹಲಿಯ ಪಿಂಕಿ ಬಲ್ಹಾರಾ ಏಷ್ಯನ್​ ಗೇಮ್ಸ್​ ಕುರಾಶ್​ (ಮಾರ್ಷಿಯಲ್​ ಆರ್ಟ್ಸ್​) ಸ್ಪರ್ಧೆಯಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯರೆನಿಸಿದ್ದಾರೆ
asian games
ಪಿಂಕಿ ಬಲ್ಹಾರಾಏಜೆನ್ಸಿ
Published on: 

ಐಚಿ-ನಗೋಯಾ: ದೆಹಲಿಯ ಪಿಂಕಿ ಬಲ್ಹಾರಾ ಏಷ್ಯನ್​ ಗೇಮ್ಸ್​ ಕುರಾಶ್​ (ಮಾರ್ಷಿಯಲ್​ ಆರ್ಟ್ಸ್​) ಸ್ಪರ್ಧೆಯಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯರೆನಿಸಿದ್ದಾರೆ. 2018ರಲ್ಲಿ ರಜತ ಪದಕ ಜಯಿಸಿದ್ದ ಅವರು ಈ ಬಾರಿ ಮಹಿಳೆಯರ 78 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಒಲಿಸಿಕೊಂಡರು. ಮೊದಲಿಗೆ ಸೆಮಿಫೈನಲ್​ಗೇರಿ ಪದಕ ಖಚಿತಪಡಿಸಿಕೊಂಡ ಅವರು, ನಂತರ ಫೈನಲ್​ಗೇರುವ ಹೋರಾಟದಲ್ಲಿ ದ. ಕೊರಿಯಾದ ಸುಮಿನ್​ ಮೋ ವಿರುದ್ಧ 0-5ರಿಂದ ಪರಾಭವಗೊಂಡು ಕಂಚಿಗೆ ತೃಪ್ತಿಪಟ್ಟರು. 27 ವರ್ಷದ ಪಿಂಕಿ ಏಷ್ಯಾಡ್​ನ ಕುರಾಶ್​ ಸ್ಪರ್ಧೆಯಲ್ಲಿ ಭಾರತಕ್ಕೆ ಒಟ್ಟಾರೆ 3 ಪದಕ ತಂದರು. 2018ರಲ್ಲಿ ಮಲಪ್ರಭಾ ಜಾಧವ್​ ಕಂಚು ಜಯಿಸಿದ್ದರು. ಪಿಂಕಿ ಕ್ವಾರ್ಟರ್​ಫೈನಲ್​ನಲ್ಲಿ ಕೊರಿಯಾದ ರಮ್​ ಲಿಮ್​ ವಿರುದ್ಧ 3-0ಯಿಂದ ಜಯಿಸಿದರು. 16ರ ಘಟ್ಟದಲ್ಲಿ ಅವರಿಗೆ ಬೈ ಲಭಿಸಿತ್ತು. ಕ್ವಾರ್ಟರ್​ಫೈನಲ್​ ವೇಳೆ ಮೊಣಕಾಲಿಗೆ ಗಾಯವಾಗಿದ್ದರಿಂದ ಸೆಮೀಸ್​ನಲ್ಲಿ ಸಮರ್ಥ ನಿರ್ವಹಣೆ ತೋರಿಸಲಾಗಲಿಲ್ಲ ಎಂದು ಪಿಂಕಿ ಬೇಸರಿಸಿದರು.

ಹಾಲಿ ಚಾಂಪಿಯನ್​ ಜ್ಯೋತಿಗೆ ಶಾಕ್​

ಕಂಪೌಂಡ್​ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಹಾಲಿ ಚಾಂಪಿಯನ್​ ಜ್ಯೋತಿ ಸುರೇಖಾ ವೆನ್ನಾಮ್​, ದ. ಕೊರಿಯಾದ 14 ವರ್ಷದ ಕಾಂಗ್​ ಯೋನ್​ ಸಿಯೋ ಎದುರು ಸೋಲಿನ ಆಘಾತ ಎದುರಿಸಿದರು. ಚಿಕಿತಾ ತನಿಪಾರ್ಥಿ ಹಾಗೂ ಗಣೇಶ್​ ಮನಿ ರತ್ನಂ ವೈಯಕ್ತಿಕ ವಿಭಾಗದಲ್ಲಿ ಕ್ವಾರ್ಟರ್​ಫೈನಲ್​ಗೇರಿದರು. ಕಳೆದ ಆವೃತ್ತಿಯ ವೈಯಕ್ತಿಕ, ತಂಡ, ಮಿಶ್ರ ತಂಡ ವಿಭಾಗದಲ್ಲಿ ಸ್ವರ್ಣ ಜಯಿಸಿದ್ದ ಜ್ಯೋತಿ ಪ್ರಿ ಕ್ವಾರ್ಟರ್​ಫೈನಲ್​ನಲ್ಲಿ 146 ಅಂಕಗಳಿಸಿದರೆ, ಕಾಂಗ್​ ಯೋನ್​ ಸಿಯೋ ರ್ಪೆಕ್ಟ್​ 150 ಪಾಯಿಂಟ್​ ಕಲೆಹಾಕಿದರು. ಚಿಕಿತಾ ಶೂಟ್​ಆಫ್​ನಲ್ಲಿ ಚೆನ್​ ಯು ಸುನ್​ ಎದುರು ಜಯ ಸಾಧಿದರೆ, ಇದಕ್ಕೆ ಮುನ್ನ 148-148 ಅಂಕದ ಸಮಬಲ ಸಾಧಿಸಿದ್ದರು. ಪುರುಷರ ವಿಭಾಗದಲ್ಲಿ ಗಣೇಶ್​ 149-148 ಅಂತರದಿಂದ ದೇಶಬಾಂಧವ ಸಹಿಲ್​ ಎದುರು ಗೆದ್ದು ಕ್ವಾರ್ಟರ್​ಫೈನಲ್​ ಅರ್ಹತೆ ಗಿಟ್ಟಿಸಿಕೊಂಡರು. ಆಂಧ್ರ ಪ್ರದೇಶದ ಗಣೇಶ್​ ಮುಂದಿನ ಸುತ್ತಿನಲ್ಲಿ ಚೀನಾ ತೈಪೆಯ ಚೆನ್​ ಚಿಹ್​ ಲುನ್​ ಸವಾಲು ಎದುರಿಸಲಿದ್ದಾರೆ.

ಟೆನಿಸ್​: ಅಂಕಿತಾ-ಋತುಜಾ ಔಟ್​

ಟೆನಿಸ್​ ಸ್ಪರ್ಧೆಯ ಮಹಿಳಾ ಡಬಲ್ಸ್​ನ ಆರಂಭಿಕ ಸುತ್ತಿನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಅನುಭವಿ ಅಂಕಿತಾ ರೈನಾ ಹಾಗೂ ಋತುಜಾ ಬೋಸಲೆ ಜೋಡಿ 7-5, 3-6, 5-10ರಿಂದ ಕಜಾಕ್​ಸ್ತಾನದ ಯುಲಿಯಾ ಪುಟಿನ್​ಸ್ಟಿವಾ-ಅನ್ನಾ ಡನಿಲಿನಾ ಎದುರು ಟೈ ಬ್ರೇಕರ್​ನಲ್ಲಿ ಹೋರಾಟಯುತ ಸೋಲು ಕಂಡರು. ಪುರುಷರ ಸಿಂಗಲ್ಸ್​ನಲ್ಲಿ ಭಾರತದ ಅಗ್ರ ಆಟಗಾರ ಸುಮಿತ್​ ನಗಾಲ್​, ಕೊರಿಯಾದ ಹಾಂಗ್​ ಸಿಯೊಂಗ್​ಚಾನ್​ ವಿರುದ್ಧ ಆರಂಭಿಕ ಸೆಟ್​ನಲ್ಲಿ 3-2ರಿಂದ ಮುನ್ನಡೆಯಲ್ಲಿದ್ದಾಗ ಮಳೆ ಅಡಚಣೆ ತಂದಿತು. ಇದರಿಂದ ಪಂದ್ಯವನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಇತ್ತೀಚೆಗೆ ನಡೆದ ಡೇವಿಸ್​ ಕಪ್​ನ ಎರಡು ಸಿಂಗಲ್ಸ್​ ಪಂದ್ಯದಲ್ಲಿ ಕೊರಿಯಾ ಆಟಗಾರನ ವಿರುದ್ಧವೇ ನಗಾಲ್​ ಸೋಲು ಅನುಭವಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net