

ಮುಂಬೈ: ಟೆಸ್ಟ್ ಕ್ರಿಕೆಟ್‌ನಲ್ಲಿ ಪರ್ಫೆಕ್ಟ್ 10 ಸಾಧನೆಯೇ ಅಪರೂಪ. ಅಂಥದ್ದರಲ್ಲಿ ಭಾರತದ ಮೂವರು ದಿಗ್ಗಜರು 2 ಬಾರಿ ಈ ಸಾಧನೆಗೆ ಸಾಕ್ಷಿಯಾಗಿರುವುದು ವಿಶೇಷ. ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿದ್ದ ವಿವಿಎಸ್ ಲಕ್ಷ್ಮಣ್ ಹಾಗೂ ಪಂದ್ಯದ ರೆಫ್ರಿಯಾಗಿರುವ ಜಾವಗಲ್ ಶ್ರೀನಾಥ್, ಅಜಾಜ್ ಸಾಧನೆಗೆ ಮೈದಾನದಲ್ಲಿ ಸಾಕ್ಷಿಯಾಗಿದ್ದರು.
ಈ ಮುನ್ನ 1999ರ ಫೆಬ್ರವರಿ 7ರಂದು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಅನಿಲ್ ಕುಂಬ್ಳೆ ಪಾಕ್ ಎದುರು ಎರಡನೇ ಇನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದಾಗ ಈ ಮೂವರು ಅಂದಿನ ಭಾರತ ತಂಡದ ಆಟಗಾರರಾಗಿ ಮೈದಾನದಲ್ಲಿದ್ದರು. ವಾಂಖೆಡೆಯಲ್ಲಿ ಶನಿವಾರವೂ ಹಾಜರಿದ್ದ ಈ ಮೂವರು 22 ವರ್ಷಗಳ ಬಳಿಕ ಸ್ಟೇಡಿಯಂನ ವಿವಿಧ ಮೂಲೆಗಳಲ್ಲಿ ಕುಳಿತು ರ್ಪೆಕ್ಟ್ 10 ಸಾಧನೆಗೆ ಮತ್ತೊಮ್ಮೆ ಸಾಕ್ಷಿಯಾದರು.
ನ್ಯೂಜಿಲೆಂಡ್ ಡ್ರೆಸ್ಸಿಂಗ್ ರೂಂಗೆ ತೆರಳಿ ಟೀಮ್ ಇಂಡಿಯಾದ ಕೆಲ ಆಟಗಾರರು ಅಜಾಜ್ ಪಟೇಲ್ ಅವರನ್ನು ಅಭಿನಂದಿಸಿ ಕ್ರೀಡಾಸ್ಫೂರ್ತಿ ಮೆರೆದರು. 10ನೇ ವಿಕೆಟ್ ಕಬಳಿಸಿ ಡ್ರೆಸ್ಸಿಂಗ್ ಕಡೆಗೆ ವಾಪಸ್ ಬರುವಾಗ ಎರಡೂ ತಂಡಗಳ ಆಟಗಾರರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು.