ಡಬ್ಲ್ಯುಪಿಎಲ್​ಗೆ ಜನಸಾಗರ, ಪಿಎಸ್​ಎಲ್​ಗೆ ಪ್ರೇಕ್ಷಕರ ಬರ! ಪಾಕ್​ ಟಿ20 ಲೀಗ್​ ಭರ್ಜರಿ ಟ್ರೋಲ್​...

wpl vs psl web
Published on

ಬೆಂಗಳೂರು: ಉದ್ಯಾನನಗರಿಯಲ್ಲಿ ನಡೆಯುತ್ತಿರುವ ಮಹಿಳೆಯರ ಐಪಿಎಲ್​ ಖ್ಯಾತಿಯ ಡಬ್ಲ್ಯುಪಿಎಲ್​ಗೆ ಕ್ರಿಕೆಟ್​ ಪ್ರೇಮಿಗಳು ಆಸಕ್ತಿಯಿಂದ ಆಗಮಿಸುತ್ತಿದ್ದಾರೆ. ಅದರಲ್ಲೂ ಆರ್​ಸಿಬಿ ಮಹಿಳಾ ತಂಡದ ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಬಹುತೇಕ ಭರ್ತಿಯಾಗುತ್ತಿವೆ. ಇದರ ನಡುವೆ ಅತ್ತ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್​ ಲೀಗ್​ (ಪಿಎಸ್​ಎಲ್​) ಪುರುಷರ ಟಿ20 ಟೂರ್ನಿಯ ಕರಾಚಿ ಪಂದ್ಯಗಳ ವೇಳೆ ಕ್ರೀಡಾಂಗಣ ಬಹುತೇಕ ಖಾಲಿಯಾಗಿವೆ. ಇದರಿಂದಾಗಿ ಪುರುಷರ ಐಪಿಎಲ್​ಗೆ ಪ್ರತಿಸ್ಪರ್ಧಿ ಎಂದು ಪಾಕಿಸ್ತಾನದ ಕ್ರಿಕೆಟ್​ ಪ್ರೇಮಿಗಳು ಹೇಳಿಕೊಳ್ಳುವ ಪಿಎಸ್​ಎಲ್​ ಟೂರ್ನಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗಳಿಗೆ ಒಳಾಗುತ್ತಿದೆ.

"ಪಿಎಸ್​ಎಲ್​ ವೇಳೆ ಗ್ಯಾಲರಿಗಿಂತ ಹೆಚ್ಚಿನ ಜನರು ಮೈದಾನದಲ್ಲಿರುತ್ತಾರೆ' ಎಂದೂ ಭಾರತದ ಕ್ರಿಕೆಟ್​ ಪ್ರೇಮಿಗಳು ಕಾಲೆಳೆಯುತ್ತಿದ್ದಾರೆ. ಐಪಿಎಲ್​&ಡಬ್ಲ್ಯುಪಿಎಲ್​ ಬಿಡಿ ಭಾರತದ ಕಬಡ್ಡಿ ಲೀಗ್​ಗೆ ಆಗಮಿಸುವಷ್ಟೂ ಪ್ರೇಕ್ಷಕರು ಪಿಎಸ್​ಎಲ್​ಗೆ ಬರುತ್ತಿಲ್ಲ ಎಂದೂ ಕೆಲವರು ತಮಾಷೆ ಮಾಡಿದ್ದಾರೆ. ಪಿಎಸ್​ಎಲ್​ನಲ್ಲಿ ಪಾಕ್​ ತಂಡದ ಮಾಜಿ ನಾಯಕ ಬಾಬರ್​ ಅಜಮ್​ಗಿಂತ (1.23 ಕೋಟಿ ರೂ.) ಡಬ್ಲ್ಯುಪಿಎಲ್​ನಲ್ಲಿ ಸ್ಮೃತಿ ಮಂದನಾ (3.4 ಕೋಟಿ ರೂ.) ಆರ್​ಸಿಬಿ ಪರ ಅಧಿಕ ವೇತನ ಪಡೆಯುತ್ತಾರೆ ಎಂಬ ಹೋಲಿಕೆ ಕೂಡ ಈ ಹಿಂದೆ ಟ್ರೋಲ್​ಗೆ ಒಳಗಾಗಿತ್ತು.

ಪಿಎಸ್​ಎಲ್​ ತ್ಯಜಿಸಿ ಜಾಮ್​ನಗರಕ್ಕೆ ಬಂದ ಪೊಲ್ಲಾರ್ಡ್​: ಕರಾಚಿ ಕಿಂಗ್ಸ್​ ತಂಡದ ಪರ ಆಡುತ್ತಿದ್ದ ವೆಸ್ಟ್​ ಇಂಡೀಸ್​ ಆಲ್ರೌಂಡರ್​ ಕೈರಾನ್​ ಪೊಲ್ಲಾರ್ಡ್​ ಪಿಎಸ್​ಎಲ್​ ಟೂರ್ನಿಯನ್ನು ಅರ್ಧದಲ್ಲೇ ತ್ಯಜಿಸಿ ಮುಂಬೈ ಇಂಡಿಯನ್ಸ್​ ಮಾಲೀಕರಾದ ಮುಕೇಶ್​&ನೀತಾ ಅಂಬಾನಿ ಪುತ್ರ ಅನಂತ್​ ಅಂಬಾನಿ ವಿವಾಹಪೂರ್ವ ಸಮಾರಂಭಕ್ಕಾಗಿ ಜಾಮ್​ನಗರಕ್ಕೆ ಆಗಮಿಸಿದ್ದಾರೆ. ಇದು ಪಿಎಸ್​ಎಲ್​ ಇನ್ನಷ್ಟು ಟ್ರೋಲ್​ಗಳಿಗೆ ಒಳಗಾಗಲು ಕಾರಣವಾಗಿದೆ. ಪಿಎಸ್​ಎಲ್​ ಯೋಗ್ಯತೆ ಏನೆಂಬುದನ್ನು ಇದು ತೋರಿಸುತ್ತಿದೆ, ಇದು ಪಿಎಸ್​ಎಲ್​ಗೆ ಆಗಿರುವ ಮುಖಭಂಗ ಎಂದು ಭಾರತದ ಕ್ರಿಕೆಟ್​ ಪ್ರೇಮಿಗಳು ತಮಾಷೆ ಮಾಡಿದ್ದಾರೆ. ಪೊಲ್ಲಾರ್ಡ್​ 2010ರಿಂದ ಮುಂಬೈ ಇಂಡಿಯನ್ಸ್​ ಜತೆಗೆ ವಿಶೇಷ ಸಂಬಂಧ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net