Champions Trophy ಟೂರ್ನಿ ಸ್ಥಳಾಂತರ ವರದಿ ನಿರಾಕರಿಸಿದ ಪಿಸಿಬಿ: ಕಾರಣ ಹೀಗಿದೆ!

New Project (2)
Published on

ಲಾಹೋರ್:  ಚಾಂಪಿಯನ್ಸ್ ಟ್ರೋಫಿ (Champions Trophy) ಪಂದ್ಯಗಳು ನಿಗದಿಯಾಗಿರುವ ಪಾಕಿಸ್ತಾನದ ಮೂರು ಕ್ರೀಡಾಂಗಣಗಳ ನವೀಕರಣ ಹಾಗೂ ನಿರ್ಮಾಣ ಕಾರ್ಯ ವಿಳಂಬಗೊಂಡಿರುವುದರಿಂದ ಐಸಿಸಿ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಿದೆ ಎಂಬ ವರದಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ, PCB) ನಿರಾಕರಿಸಿದೆ.

ಪ್ರಸಾರ, ಆತಿಥ್ಯ ಮತ್ತು ಟೂರ್ನಿಯ ಕಾರ್ಯನಿರ್ವಹಣೆ ಅಧಿಕಾರಿಗಳು ಸೇರಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಯೋಗ ಈಗಾಗಲೆ ಪಾಕಿಸ್ತಾನಕ್ಕೆ ಆಗಮಿಸಿದ್ದು, ವೇಳಾಪಟ್ಟಿಯಂತೆ ಟೂರ್ನಿ ನಡೆಯಲಿದೆ ಎಂದು ಪಿಸಿಬಿ ಸ್ಪಷ್ಟಪಡಿಸಿದೆ.ಪಾಕಿಸ್ತಾನದ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ, ಲಾಹೋರ್‌ನ ಗಡಾಫಿ ಹಾಗೂ ಕರಾಚಿಯ ನ್ಯಾಷನಲ್ ಬ್ಯಾಂಕ್ ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯಲಿವೆ. ಆದರೆ ಭಾರತದ ಪಂದ್ಯಗಳು ದುಬೈನಲ್ಲಿ ನಿಗದಿಯಾಗಿವೆ.

‘ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸಲು ಪಿಸಿಬಿ 12 ಶತಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ. ಅಪೂರ್ಣ ಕಾಮಗಾರಿಯಿಂದ ಟೂರ್ನಿಯನ್ನು ಸ್ಥಳಾಂತರಿಸಲಾಗುವುದು ಎಂಬ ಊಹಾಪೋಹದ ಕಾರಣ ಕ್ರೀಡಾಂಗಣದ ಪ್ರಗತಿಯ ಬಗ್ಗೆ ಈಗಾಗಲೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇಂತಹ ಊಹಾಪೋಹದ ಸುದ್ದಿಗಳು ಪಿಸಿಬಿ, ಐಸಿಸಿ, ಸರ್ಕಾರ, ವಾಣಿಜ್ಯ ಪಾಲುದಾರರು ಮತ್ತು ಅಭಿಮಾನಿಗಳ ನಡುವೆ ಗೊಂದಲವನ್ನು ಉಂಟುಮಾಡುತ್ತದೆ. ಜತೆಗೆ ಟೂರ್ನಿಯ ಟಿಕೆಟ್ ಮಾರಾಟದ ಮೇಲೂ ಪರಿಣಾಮ ಬೀರಲಿದೆ’ಎಂದು ಪಿಸಿಬಿ ತಿಳಿಸಿದೆ.

ಕ್ರೀಡಾಂಗಣದ ಕೆಲಸ ಪಿಸಿಬಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದ್ದು, ಸಮಯಕ್ಕೆ ಸರಿಯಾಗಿ ಪಂದ್ಯಗಳನ್ನು ಆಯೋಜಿಸಲು ನಾವೂ ಸಿದ್ಧ ಎಂದು ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net