

PCB Official: ನಿನ್ನೆ (ಸೆ.14) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ ಭಾರೀ ಅಂತರದ ಭರ್ಜರಿ ಜಯ ಸಾಧಿಸಿತು. ಈ ವೇಳೆ ಭಾರತ ಎದುರು ಮಂಡಿಯೂರಿದ ಪಾಕಿಸ್ತಾನಕ್ಕೆ ವ್ಯಾಪಕ ಛೀಮಾರಿ, ಟೀಕೆಗಳು ವ್ಯಕ್ತವಾಯಿತು. ಸದ್ಯ ಇದೇ ಈಗ ಇಬ್ಬರು ಪಾಕ್ ಅಧಿಕಾರಿಗಳ ಹುದ್ದೆಗೆ ಕೊಡಲಿಪೆಟ್ಟು ನೀಡಿದೆ.
ಸೂರ್ಯಕುಮಾರ್ ಯಾದವ್ ಪಡೆ, ಪಂದ್ಯ ಗೆದ್ದ ಕೂಡಲೇ ನೇರವಾಗಿ ಡ್ರೆಸ್ಸಿಂಗ್ ರೂಮ್ಗೆ ಹೋಯಿತು. ಪಾಕಿಸ್ತಾನಿ ಆಟಗಾರರು ಹ್ಯಾಂಡ್‌ಶೇಕ್‌ಗಾಗಿ ಕ್ರೀಡಾಂಗಣದಲ್ಲಿ ಕಾಯುತ್ತಿದ್ದರೂ ಕೂಡ ಭಾರತೀಯ ಆಟಗಾರರು ಅವರನ್ನು ನಿರ್ಲಕ್ಷಿಸಿ, ರೂಮ್ನ ಬಾಗಿಲು ಮುಚ್ಚಿದರು. ಈ ಮೂಲಕ ತಮ್ಮ ನಿಲುವಿಗೆ ಬದ್ಧರಾದರು. ಆದರೆ, ಇದರಿಂದ ಪಾಕಿಸ್ತಾನಕ್ಕೆ ಮೈದಾನದಲ್ಲಿ ಭಾರೀ ಮುಖಭಂಗ ಉಂಟಾಯಿತು. ಈ ವಿಚಾರಕ್ಕೆ ಬಿಸಿಸಿಐ ಮತ್ತು ಟೀಮ್ ಇಂಡಿಯಾ ವಿರುದ್ಧ ಅಸಮಾಧಾನ ಹೊರಹಾಕಿರುವ ಪಾಕ್, ಭಾರತದಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆ ಮುಖ ಪರಚಿಕೊಂಡಿದೆ.
ಇನ್ನು ಟಾಸ್ ಸಮಯದಲ್ಲಿ ಯಾವುದೇ ಹಸ್ತಲಾಘವ ಇರುವುದಿಲ್ಲ ಎಂದು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಎರಡೂ ತಂಡಗಳ ನಾಯಕರಿಗೆ ತಿಳಿಸಿದ್ದು ಸರಿಯಲ್ಲ. ಇದು ಅಂತಾರಾಷ್ಟ್ರೀಯ ಸಂಸ್ಥೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಲಾಗಿದೆ ಎಂದು ಪಿಸಿಬಿ ಆರೋಪಿಸಿದೆ. 2025ರ ಏಷ್ಯಾಕಪ್‌ನಿಂದ ಆತನನ್ನು ಕಿತ್ತುಬಿಸಾಡಿ ಎಂದು ಐಸಿಸಿಗೆ ಒತ್ತಾಯಿಸಿದೆ.
'ನ್ಯೂಸ್ 18' ವರದಿ ಪ್ರಕಾರ, ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಆಂತರಿಕ ಪರಿಶೀಲನೆ ನಡೆಸಿದ್ದು, ಮೈದಾನದಲ್ಲಿ ನಡೆದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಉಸ್ಮಾನ್ ವಾಹ್ಲಾ ವಿಫಲರಾಗಿದ್ದಾರೆ ಎಂದು ತೀರ್ಮಾನಿಸಲಾಯಿತು. ಕ್ರೀಡಾ ಮನೋಭಾವದ ವಿಷಯಗಳಲ್ಲಿ ಪಾಕಿಸ್ತಾನದ ಸ್ಥಾನವನ್ನು ಕಾಪಾಡುವಲ್ಲಿ ಮಂಡಳಿಯ ಅಧಿಕಾರಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ.
ಕ್ರೀಡಾಸ್ಫೂರ್ತಿಯನ್ನು ಕಾಪಾಡಬೇಕಿತ್ತು. ಪಂದ್ಯ ಪ್ರಾರಂಭಕ್ಕೂ ಮುನ್ನವೇ ಇಂತಹ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಬೇಕಿತ್ತು ಎಂದು ದೂಷಿಸಿ, ಪಿಸಿಬಿ ಅಧಿಕಾರಿಯನ್ನು ಕರ್ತವ್ಯದಿಂದ ವಜಾಗೊಳಿಸಿದೆ. ಈ ಕುರಿತು ಪಿಸಿಬಿ ಈಗಾಗಲೇ ಹಲವಾರು ಹೇಳಿಕೆಗಳನ್ನು ಕೊಟ್ಟಿದ್ದು, ಐಸಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮುಂದಿನ ಯುಎಇ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದೆ,(ಏಜೆನ್ಸೀಸ್).