

Ajinkya Rahane : ಪ್ರಸ್ತಕ್ತ ಐಪಿಎಲ್ ಸೀಸನ್ನಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡಕ್ಕೆ ಕಹಿ ಅನುಭವವಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯದಲ್ಲಿ ತಂಡದ ಬ್ಯಾಟ್ಸ್‌ಮನ್‌ಗಳು ಕಳಪೆ ಪ್ರದರ್ಶನ ನೀಡಿದ ಪರಿಣಾಮ 112 ರನ್‌ಗಳ ಅಲ್ಪ ಮೊತ್ತದ ಗುರಿಯನ್ನು ಮುಟ್ಟುವಲ್ಲಿಯೂ ವಿಫಲರಾದರು. ಇದರಿಂದ ನಾಯಕ ಅಂಜಿಕ್ಯಾ ರಹಾನೆ ತೀವ್ರ ನಿರಾಶೆಗೊಂಡರು.
ಚಂಡೀಗಢದ ಮುಲ್ಲನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಲ್ಲಿ ನಡೆದ ಪಂದ್ಯದಲ್ಲಿ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 15.3 ಓವರ್‌ಗಳಲ್ಲಿ 111 ರನ್‌ಗಳಿಗೆ ಸರ್ವಪತನಗೊಂಡಿತು. ಪ್ರಿಯಾಂಶ್ ಆರ್ಯ (12 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ಗಳೊಂದಿಗೆ 22 ರನ್) ಮತ್ತು ಪ್ರಭ್ಸಿಮ್ರಾನ್ ಸಿಂಗ್ (15 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 30) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಾಯಕ ಶ್ರೇಯಸ್ ಅಯ್ಯರ್ ಮತ್ತು ಇತರ ಎಲ್ಲ ಬ್ಯಾಟ್ಸ್‌ಮನ್‌ಗಳು ಸಂಪೂರ್ಣ ವಿಫಲರಾದರು. ಕೆಕೆಆರ್ ಬೌಲರ್‌ಗಳಲ್ಲಿ ಹರ್ಷಿತ್ ರಾಣಾ ಮೂರು ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ತಲಾ ಎರಡು ವಿಕೆಟ್ ಪಡೆದರು. ಅವರೊಂದಿಗೆ ನೋರ್ತೇಜ್ ಮತ್ತು ವೈಭವ್ ಅರೋರಾ ತಲಾ ಒಂದು ವಿಕೆಟ್ ಪಡೆದರು.
112 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್ಗೆ ಪಂಜಾಬ್ ವೇಗಿ ಮಾರ್ಕೊ ಜಾನ್ಸೆನ್ ಮೊದಲ ಓವರ್‌ನಲ್ಲಿ ಭಾರಿ ಆಘಾತ ನೀಡಿದರು. ಫಾರ್ಮ್‌ನಲ್ಲಿದ್ದ ಬ್ಯಾಟ್ಸ್‌ಮನ್ ಸುನೀಲ್ ನಾರಾಯಣ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ನಂತರದ ಓವರ್‌ನಲ್ಲಿ ಮತ್ತೊಬ್ಬ ವೇಗಿ ಕ್ಸೇವಿಯರ್ ಬಾರ್ಟ್ಲೆಟ್, ಕ್ವಿಂಟನ್ ಡಿ ಕಾಕ್ ಅವರನ್ನು ಔಟ್ ಮಾಡಿದರು. ಅದಾದ ನಂತರ, ರಘುವಂಶಿ ಮತ್ತು ನಾಯಕ ಅಜಿಂಕ್ಯಾ ರಹಾನೆ ಇನ್ನಿಂಗ್ಸ್ ಸುಧಾರಿಸಲು ಪ್ರಯತ್ನಿಸಿದರು. ಆ ಸಮಯದಲ್ಲಿ, ದಾಳಿಗೆ ಇಳಿದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಪಂದ್ಯದ ಮುಖವನ್ನೇ ಬದಲಾಯಿಸಿದರು. ರಹಾನೆ, ರಿಂಕು ಸಿಂಗ್, ರಮಣದೀಪ್ ಹಾಗೂ ರಘುವಂಶಿ ವಿಕೆಟ್ ಕಬಳಿಸಿದರು. ಕೊನೆಯಲ್ಲಿ ಮಾರ್ಕೊ ಜಾನ್ಸೆನ್ ಅವರು ವಿನಾಶಕಾರಿ ಬ್ಯಾಟ್ಸ್‌ಮನ್ ರಸೆಲ್ ಅವರನ್ನು ಔಟ್ ಮಾಡಿ ತಮ್ಮ ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟರು. 3.1 ಓವರ್‌ಗಳನ್ನು ಬೌಲಿಂಗ್ ಮಾಡಿದ ಮಾರ್ಕೊ ಜಾನ್ಸೆನ್ ಕೇವಲ 17 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು.
ಪಂದ್ಯದ ಫಲಿತಾಂಶದಿಂದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ತೀವ್ರ ನಿರಾಶೆಗೊಂಡಿದ್ದಾರೆ. ಎರಡೂ ತಂಡಗಳ ಆಟಗಾರರ ನಡುವಿನ ಪಂದ್ಯದ ನಂತರದ ಮಾತುಕತೆಯ ಸಂದರ್ಭದಲ್ಲಿ ರಹಾನೆ ಅವರು ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರೊಂದಿಗೆ ಮಾತನಾಡಿದಾಗ ಅವರು ನಿರಾಸೆಗೊಂಡಿರುವುದು ಸ್ಪಷ್ಟವಾಯಿತು. ಕ್ಯಾ ಫಾಲ್ಟು ಬ್ಯಾಟಿಂಗ್ ಕರಿ ಹಮ್ನೆ (ನಾವು ಎಷ್ಟು ಕಳಪೆಯಾಗಿ ಆಡಿದೆವು) ಎಂದು ರಹಾನೆ ಅಯ್ಯರ್‌ಗೆ ಹಿಂದಿಯಲ್ಲಿ ಹೇಳಿದರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ನೋಡಿದ ನೆಟ್ಟಿಗರು ಪಂದ್ಯದ ಫಲಿತಾಂಶದಿಂದ ರಹಾನೆ ತೀವ್ರ ನಿರಾಶೆಗೊಂಡಿದ್ದಾರೆ ಮತ್ತು ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ತುಂಬಾ ಮನನೊಂದಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಹಿಂದೆ ಕೋಲ್ಕತ ತಂಡದ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಮುಂದೆಯೇ ರಹಾನೆ, ತಮ್ಮ ತಂಡದ ಬ್ಯಾಟರ್ಗಳನ್ನು ಅವಮಾನಿಸಿದ್ದಾರೆ ಎಂದು ಇನ್ನು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)