ಪಟನಾ ಪೈರೇಟ್ಸ್- ಪುಣೇರಿ ಪಂದ್ಯ ರೋಚಕ ಟೈ: ಮಿಂಚಿದ ಅಸ್ಲಾಮ್, ಸಚಿನ್

New-Project-36
Published on

ಪಟನಾ: ಪಂದ್ಯದ ದ್ವಿತೀಯಾರ್ಧದಲ್ಲಿ ಪ್ರಬಲ ತಿರುಗೇಟು ನೀಡಿದ ಪಟನಾ ಪೈರೇಟ್ಸ್ ತಂಡ ಪ್ರೊ ಕಬಡ್ಡಿ ಲೀಗ್ ಹತ್ತನೇ ಆವೃತ್ತಿಯ 91ನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ಡ್ರಾ ಸಾಧಿಸಿ ಮೂರು ಅಂಕ ಹಂಚಿಕೊಂಡಿದೆ.ಪಾಟಲೀಪುತ್ರ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು ತಲಾ 32-32 ಅಂಕಗಳಿಂದ ಸಮಬಲ ಸಾಧಿಸಿದವು.

ಪೈರೇಟ್ಸ್ ತಂಡದ ಪರ ಸಚಿನ್ ಗರಿಷ್ಠ 9 ಅಂಕ ಕಲೆಹಾಕಿದರೆ, ಮಯೂರ್ ಕದಮ್, ಸಂದೀಪ್, ಮಂಜೀತ್ ಕ್ರಮವಾಗಿ 5 , 4 ಮತ್ತು 4 ಅಂಕ ಗಳಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಅತ್ತ ಪುಣೇರಿ ಪರ ಅಸ್ಲಾಮ್ ಮುಸ್ತಾಪಾ 13 ಅಂಕಗಳಿಸಿ ಏಕಾಂಗಿ ಹೋರಾಟ ನೀಡಿದರು. ಆದರೆ ತಂಡಕ್ಕೆ ಪೂರ್ಣ ಅಂಕ ತಂದುಕೊಡುವಲ್ಲಿ ಅವರಿಗೆ ಸಾಧ್ಯವಾಗಲಿಲ್ಲ. ಈ ಫಲಿತಾಂಶದೊಂದಿಗೆ ಪುಣೇರಿ ಒಟ್ಟು 63 ಅಂಕಗಳನ್ನು ಕಲೆಹಾಕಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಪಟನಾ 45 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದಿದೆ. ಹಿನ್ನಡೆ ತಗ್ಗಿಸುವ ಒತ್ತಡದಲ್ಲಿ ದ್ವಿತೀಯಾರ್ಧ ಆರಂಭಿಸಿದ ಪಟನಾ ತಂಡ ಸಂಘಟಿತ ಹೋರಾಟಕ್ಕೆ ಒತ್ತು ನೀಡಿತು. ಅದರಲ್ಲೂ ನಾಯಕ ಸಚಿನ್ ಮೊದಲ ಅವಧಿಗಿಂತ ಉತ್ತಮ ಆಟವಾಡಿದರು.

ಹೀಗಾಗಿ 25ನೇ ನಿಮಿಷಕ್ಕೆ ಪಟನಾ ತನ್ನ ಹಿನ್ನಡೆಯನ್ನು 17-21ಕ್ಕೆ ತಗ್ಗಿಸಿತು. 30ನೇ ನಿಮಿಷದಲ್ಲಿ 20-24ರಲ್ಲಿ ಪ್ರತಿ ಹೋರಾಟ ಸಂಘಟಿಸಿದ್ದ ಪಟನಾ ಪೈರೇಟ್ಸ್ ಮರು ನಿಮಿಷದಲ್ಲಿ ಪುಣೇರಿ ಪಲ್ಟಾನ್ ತಂಡದ ಅಭಿನಾಷ್, ಗೌರವ್ ಖತ್ರಿ ಮತ್ತು ಅಸ್ಲಾಮ್ ಅವರನ್ನು ಔಟ್ ಮಾಡಿತು. ಇದಕ್ಕೆ ಕಾರಣವಾಗಿದ್ದು ರೈಡರ್, ನಾಯಕ ಸಚಿನ್. ಎದುರಾಳಿ ತಂಡವನ್ನು ಆಲ್ಔಟ್ ಮಾಡುವ ಮೂಲಕ ಮೊದಲ ಅವಧಿಯ ಆಲ್ ಔಟ್‌ಗೆ ಪೈರೇಟ್ಸ್ ಸೇಡು ತೀರಿಸಿಕೊಂಡಿತು.

ಒಂದೇ ರೈಡ್‌ನಲ್ಲಿ 5 ಅಂಕ ಸಂಪಾದಿಸಿದ ಪಟನಾ ಪಂದ್ಯದಲ್ಲಿ ಮೊದಲ ಬಾರಿಗೆ 25-24ರಲ್ಲಿ ಪುಣೇರಿ ತಂಡದ ಮೇಲೆ ಮೇಲುಗೈ ಸಾಧಿಸಿತು. ನಂತರ ಇದೇ ಹಿಡಿತವನ್ನು ಕೊನೆಯವರೆಗೂ ಮುಂದುವರಿಸಿದ ಪಟನಾ ಪೈರೇಟ್ಸ್ ಆಟಗಾರರು ಪುಣೇರಿ ತಂಡದ ಮೇಲೆ ಒತ್ತಡ ಕಾಯ್ದುಕೊಂಡರು.

ಪಂದ್ಯ ಮುಕ್ತಾಯಕ್ಕೆ 3 ನಿಮಿಷಗಳಿರುವಾಗ 4 ಅಂಕಗಳ (27-31) ಹಿನ್ನಡೆಯಲ್ಲಿದ್ದ ಅಸ್ಲಾಮ್ ನಾಯಕತ್ವದ ಪುಣೇರಿ, ಸತತ 3 ಅಂಕಗಳಿಸಿ 30-31ರಿಂದ ದಿಟ್ಟ ಹೋರಾಟ ಸಂಘಟಿಸಿತು.

ಜನವರಿ 28ರಂದು ಜೈಪುರ ಪಿಂಕ್ ಪ್ಯಾಂಥರ್ಸ್‌ ಮತ್ತು ಬೆಂಗಳೂರು ಬುಲ್ಸ್ ಹಾಗೂ ತಮಿಳ್ ತಲೈವಾಸ್ ಹಾಗೂ ಯು ಮುಂಬಾ ತಂಡಗಳು ಪೈಪೋಟಿ ನಡೆಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net