

Pat Cummins: ನಿನ್ನೆ (ಏ.03) ನಡೆದ ಕೆಕೆಆರ್ ಮತ್ತು ಎಸ್ಆರ್ಎಚ್ ನಡುವಿನ ಪಂದ್ಯದಲ್ಲಿ ಅಂಗಕ್ರಿಶ್ ರಘುವಂಶಿ (50 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ವೆಂಕಟೇಶ್ ಅಯ್ಯರ್ (60 ರನ್, 29 ಎಸೆತ, 7 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಜತೆಗೆ ಬೌಲರ್‌ಗಳ ಸಂಘಟಿತ ನಿರ್ವಹಣೆಯ ನೆರವಿನಿಂದ ಹಾಲಿ ಚಾಂಪಿಯನ್ ಕೆಕೆಆರ್, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 80 ರನ್‌ಗಳ ಭಾರೀ ಅಂತರದಲ್ಲಿ ಮಣಿಸಿತು.
ಈ ಬೃಹತ್ ಗೆಲುವು ದಾಖಲಿಸಿದ ಅಜಿಂಕ್ಯ ರಹಾನೆ ಪಡೆ ಗೆಲುವಿನ ಹಳಿ ಏರಿದರೆ, ಟೂರ್ನಿಯಲ್ಲಿ ಸತತ 3ನೇ ಸೋಲಿಗೆ ತುತ್ತಾದ ಪ್ಯಾಟ್ ಕಮ್ಮಿನ್ಸ್ ಬಳಗ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಜಾರಿತು. ಇದೇ ಬೇಸರದಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್ ಕ್ಯಾಪ್ಟನ್ ಕಮ್ಮಿನ್ಸ್, ತಮ್ಮ ತಂಡದ ವಿರುದ್ಧ ತೀವ್ರ ಬೇಸರ ಹೊರಹಾಕಿದರು. ಇದು ಫ್ರಾಂಚೈಸಿ ಅಭಿಮಾನಿಗಳನ್ನು ಕೆರಳಿಸಿದೆ.
ಐಪಿಎಲ್ ಆವೃತ್ತಿಯ ಪ್ರಾರಂಭವಾದಾಗಿನಿಂದ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಉತ್ತಮ ಆಲ್ರೌಂಡ್ ಪ್ರದರ್ಶನ ನೀಡಿರುವ ಎಸ್ಆರ್ಚ್, ನಂತರದ ಪಂದ್ಯದಗಳಲ್ಲಿ ತೀರ ಕಳಪೆ ಪ್ರದರ್ಶನ ನೀಡಿದೆ. ಇದರಿಂದ ಐಪಿಎಲ್ 18ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್ ಸೋಲನ್ನು ಅನುಭವಿಸಿದೆ. ಈ ಸೋಲಿನಿಂದ ಕಂಗೆಟ್ಟಿರುವ ಕ್ಯಾಪ್ಟನ್ ಕಮ್ಮಿನ್ಸ್, ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ವೈಫಲ್ಯಗಳಿಂದ ನಾವು ಸೋತೆವು ಎಂದಿದ್ದಾರೆ.
"ಒಟ್ಟಿಗೆ ಒಂದು ತಂಡವಾಗಿ ನಾವು ಉತ್ತಮವಾಗಿ ಕಾಣಿಸಲಿಲ್ಲ. ವಿಕೆಟ್ಗಳನ್ನು ಪಡೆದ ರೀತಿ ಚೆನ್ನಾಗಿತ್ತು. ಆದರೆ, ಹಲವು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ನಾವು ವಿಫಲವಾದೆವು. ಫೀಲ್ಡಿಂಗ್ನಲ್ಲಿ ಒಂದಷ್ಟು ಮಿಸ್ಟೇಕ್ಗಳು ಆಯಿತು. ಈ ಸೋಲಿನಿಂದ ಒಳ್ಳೆಯ ಪಾಠ ಪಡೆದಿದ್ದೀವಿ. ಮುಂದೆ ಇಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ" ಎಂದು ಕಮ್ಮಿನ್ಸ್ ಬೇಸರ ಹೊರಹಾಕಿದ್ದಾರೆ,(ಏಜೆನ್ಸೀಸ್).