

ನವದೆಹಲಿ: ನಿನ್ನೆಯಷ್ಟೇ (ಫೆ.06) ವಿಸಿಎ ಕ್ರೀಡಾಂಗಣದಲ್ಲಿ ಆಂಗ್ಲರ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಗೆದ್ದು ಬೀಗಿದ ಟೀಮ್ ಇಂಡಿಯಾ, ಇದೀಗ ಎರಡನೇ ಪಂದ್ಯದಲ್ಲಿಯೂ ಭರ್ಜರಿ ಜಯ ಸಾಧಿಸಲು ಎದುರುನೋಡುತ್ತಿದೆ. ಈ ಮುಖೇನ ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳಲು ಮುಂದಾಗಿದೆ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ಗಳನ್ನು ಬೆಂಬಿಡದೆ ಕಾಡಿದ ಭಾರತದ ಬೌಲರ್ಗಳು, ತಮ್ಮ ಕೈಚಳಕ ತೋರುವಲ್ಲಿ ಯಶಸ್ವಿಯಾದರು. ಈ ಪೈಕಿ 3 ವಿಕೆಟ್ಗಳನ್ನು ಕಬಳಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಯುವ ಕ್ರಿಕೆಟಿಗ ಹರ್ಷಿತ್ ರಾಣಾ.
ತಮ್ಮ ವೃತ್ತಿಜೀವನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಹರ್ಷಿತ್ ರಾಣಾ, ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಮಾದರಿಯಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿರುವುದು ಗಮನಾರ್ಹ. ಪರ್ತ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ತಮ್ಮ ಚೊಚ್ಚಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಮೂರು ವಿಕೆಟ್ಗಳನ್ನು ಕಬಳಿಸಿದ್ದ ರಾಣಾ, ನಂತರ ಪುಣೆಯಲ್ಲಿ ನಡೆದ ತಮ್ಮ ಮೊದಲ ಟಿ20 ಮ್ಯಾಚ್ನಲ್ಲಿ ಮೂವರು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗೆ ಕಳಿಸಿದ್ದರು. ಇನ್ನೂ ನಿನ್ನೆ ಆಡಿದ ಪಂದ್ಯದಲ್ಲಿ ಜಾಸ್ ಬಟ್ಲರ್ ನಾಯಕತ್ವದಲ್ಲಿ ಅಖಾಡಕ್ಕಿಳಿದ ಇಂಗ್ಲೆಂಡ್ ಪಡೆಯ ಮೂವರು ಸ್ಫೋಟಕ ಬ್ಯಾಟ್ಸ್ಮನ್ಗಳ ವಿಕೆಟ್ ಕಿತ್ತು ಸಂಭ್ರಮಿಸಿದರು. ಇದು ಟೀಮ್ ಇಂಡಿಯಾ ಗೆಲುವಿಗೂ ಪ್ರಮುಖ ಕಾರಣವಾಯಿತು.
ರಾಣಾ ಬೌಲಿಂಗ್ ವೈಖರಿಯನ್ನು ಕೊಂಡಾಡುತ್ತಿರುವ ಭಾರತದ ಮಾಜಿ ಕ್ರಿಕೆಟಿಗರ ಪೈಕಿ ಪಾರ್ಥಿವ್ ಪಟೇಲ್ ಮಾತನಾಡಿ, "ಮೊಹಮ್ಮದ್ ಸಿರಾಜ್ಗೆ ಹೋಲಿಸಿದರೆ ರಾಣಾ ಅದ್ಭುತವಾಗಿ ಹಾಗೂ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಸಿರಾಜ್ರ ಪ್ರಭಾವ ಹಳೆಯ ಬಾಲ್ನೊಂದಿಗೆ ಕಡಿಮೆಯಾಗುತ್ತದೆ. ಮತ್ತು ಅವರು ಸ್ಥಿರವಾಗಿ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ನಮಗೆ ಹೊಸ ಬಾಲ್ನೊಂದಿಗೆ, ಮಧ್ಯಮ ಓವರ್ಗಳಲ್ಲಿ ಮತ್ತು ಪಂದ್ಯದ ಕೊನೆಯ ಹಂತದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಬಲ್ಲ ಬೌಲರ್ ತಂಡಕ್ಕೆ ಬೇಕಾಗಿತ್ತು. ಈಗ ಅವರು ಸಿಕ್ಕಿದ್ದಾರೆ" ಎಂದರು.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಪಾರ್ಥಿವ್ ಪಟೇಲ್ ಈ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ,(ಏಜೆನ್ಸೀಸ್).