ಕಿವೀಸ್ ಗೆಲುವಿಗೆ 368 ರನ್ ಗುರಿ: 16 ವರ್ಷಗಳ ಬಳಿಕ ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್ ಫಿಲಿಪ್ಸ್

New-Project-3-1
Published on

ವೆಲ್ಲಿಂಗ್ಟನ್: ಅರೆಕಾಲಿಕ ಸ್ಪಿನ್ನರ್ ಗ್ಲೆನ್ ಫಿಲಿಪ್ಸ್ (45ಕ್ಕೆ5) ಚೊಚ್ಚಲ ಐದು ವಿಕೆಟ್ ಗೊಂಚಲು ನೆರವಿನಿಂದ ಆತಿಥೇಯ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ತಿರುಗೇಟು ನೀಡಿದೆ. ಗೆಲುವಿಗೆ ಬೃಹತ್ ಮೊತ್ತ ಬೆನ್ನತ್ತಿರುವ ಕಿವೀಸ್ ಬೆಂಗಳೂರು ಮೂಲದ ಆಲ್ರೌಂಡರ್ ರಚಿನ್ ರವೀಂದ್ರ (56* ರನ್, 94 ಎಸೆತ, 8 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಬಲದಿಂದ ಸುಸ್ಥಿಯಲ್ಲಿದೆ.

ಪಂದ್ಯದ ಮೂರನೇ ದಿನವಾದ ಭಾನುವಾರ 2 ವಿಕೆಟ್‌ಗೆ 13 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಾ, 51.1 ಓವರ್‌ಗಳಲ್ಲಿ 164 ರನ್‌ಗಳಿಗೆ ಆಲೌಟ್ ಆಯಿತು. ಟೆಸ್ಟ್‌ನಲ್ಲಿ ಚೊಚ್ಚಲ ಬಾರಿ 5 ವಿಕೆಟ್ ಪಡೆದ ಗ್ಲೆನ್ ಫಿಲಿಪ್ಸ್ ಕಿವೀಸ್ ಪರ 16 ವರ್ಷಗಳ ಬಳಿಕ ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್ ಎನಿಸಿದರು. 2006ರಲ್ಲಿ ಜೀತನ್ ಪಟೇಲ್ ಕೊನೆಯದಾಗಿ ಈ ಸಾಧನೆ ಮಾಡಿದರು. 368 ರನ್‌ಗಳ ಗುರಿ ಪಡೆದ ಕಿವೀಸ್ ಎರಡನೇ ಸರದಿಯಲ್ಲಿ ದಿನದಂತ್ಯಕ್ಕೆ 3 ವಿಕೆಟ್‌ಗೆ 111 ರನ್‌ಗಳಿಸಿದ್ದು, ಗೆಲುವಿಗೆ ಇನ್ನು 258 ರನ್ ಬೇಕಿದೆ. ರಚಿನ್ ರವೀಂದ್ರ ಜತೆಯಾಗಿ ಡೆರಿಲ್ ಮಿಚೆಲ್ (12*) 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಆಸ್ಟ್ರೇಲಿಯಾ: 383 ಹಾಗೂ 164 (ಖವಾಜ 28, ಲ್ಯಾನ್ 41, ಕ್ಯಾಮರಾನ್ ಗ್ರೀನ್ 34, ಹೆಡ್ 29, ಫಿಲಿಪ್ಸ್ 45ಕ್ಕೆ 5, ಮ್ಯಾಟ್ ಹೆನ್ರಿ 36ಕ್ಕೆ 3).

ನ್ಯೂಜಿಲೆಂಡ್: 179 ಹಾಗೂ 3 ವಿಕೆಟ್‌ಗೆ 111 (ಲಾಥಮ್ 15, ರಚಿನ್ 56*, ಮಿಚೆಲ್ 12*, ನಾಥನ್ ಲ್ಯಾನ್ 27ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net