

ಪ್ಯಾರಿಸ್: ಒಲಿಂಪಿಕ್ಸ್ ಇತಿಹಾಸದಲ್ಲೇ ಅತ್ಯಂತ ರೋಚಕವಾದ ಪುರುಷರ 100 ಮೀಟರ್ ಓಟದ ಫೈನಲ್ನಲ್ಲಿ ಅಮೆರಿಕದ ನೋವಾ ಲೈಲ್ಸ್ ಕೇವಲ 0.005 ಸೆಕೆಂಡ್ ಅಂತರದಿಂದ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಈ ಮೂಲಕ 27 ವರ್ಷದ ನೋವಾ ಲೈಲ್ಸ್ ಪ್ಯಾರಿಸ್ ಒಲಿಂಪಿಕ್ಸ್ನ ಅತಿವೇಗದ ಓಟಗಾರರಾಗಿ ಹೊರಹೊಮ್ಮಿದ್ದಾರೆ. ಜಮೈಕಾದ ಕಿಶೇನ್ ಥಾಂಪ್ಸನ್ ಒಂದು ಸೆಕೆಂಡಿನ ಐದು ಸಾವಿರನೇ ಅಂತರದಿಂದ ಹಿಂದುಳಿದು ರಜತ ಪದಕಕ್ಕೆ ತೃಪ್ತಿಪಟ್ಟರು.
ಸ್ಟೇಡ್ ಡಿ ಫ್ರಾನ್ಸ್ನಲ್ಲಿ ಭಾನುವಾರ ರಾತ್ರಿ ನೇರಳೆ ಟ್ರ್ಯಾಕ್ನಲ್ಲಿ ನಡೆದ ಫೈನಲ್ನಲ್ಲಿ ಇದೇ ಮೊದಲ ಬಾರಿಗೆ ಎಲ್ಲ 8 ಓಟಗಾರರು 10 ಸೆಕೆಂಡ್ನೊಳಗೆ ಸ್ಪರ್ಧೆ ಮುಗಿಸಿದರು. ವಿಶ್ವ ಚಾಂಪಿಯನ್ ನೋವಾ ಲೈಲ್ಸ್ ಮತ್ತು ಥಾಂಪ್ಸನ್ 9.79 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿದರು. ಆಗ ಫೋಟೋಫಿನಿಷ್ ಲೆಕ್ಕಾಚಾರದಲ್ಲಿ ಲೈಲ್ಸ್ 9.784 ಸೆಕೆಂಡ್ ಮತ್ತು ಥಾಂಪ್ಸನ್ 9.789 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿದ್ದಾರೆ ಎಂದು ತೀರ್ಪು ಹೊರಬಿದ್ದಿತು. ಬೆನ್ನಲ್ಲೇ ಲೈಲ್ಸ್ ಚೊಚ್ಚಲ ಒಲಿಂಪಿಕ್ಸ್ ಸ್ವರ್ಣ ಪದಕದ ಸಂಭ್ರಮ ಆಚರಿಸಿದರು.
ಅಮೆರಿಕದ ಮತ್ತೋರ್ವ ಓಟಗಾರ ಫ್ರೆಡ್ ಕೆರ್ಲಿ (9.81) ಕಂಚಿನ ಪದಕ ಜಯಿಸಿದರೆ, ದಣ ಆಫ್ರಿಕಾದ ಅಕಾನಿ ಸಿಂಬಿನೆ (9.82ಸೆ.) ಕೇವಲ ಕೇವಲ 0.001 ಸೆಕೆಂಡ್ನಿಂದ ಪದಕ ವಂಚಿತರಾಗಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಟೋಕಿಯೊದಲ್ಲಿ ಅಚ್ಚರಿಯ ರೀತಿಯಲ್ಲಿ ಚಿನ್ನ ಗೆದ್ದು ಪ್ಯಾರಿಸ್ನಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದ ಇಟಲಿಯ ಮಾರ್ಸೆಲ್ ಜೇಕಬ್ಸ್ (9.85 ಸೆ) 5ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಬೋತ್ಸ್ವಾನಾದ ಲೆಟ್ಸಿಲೆ ಟೆಬೊಗೊ (9.86 ಸೆ) 6ನೇ ಸ್ಥಾನ ಪಡೆದರು. ಅಮೆರಿಕದ 3ನೇ ಸ್ಪರ್ಧಿ ಕೆನ್ನಿ ಬೆಡ್ನಾರೆಕ್ (9.88 ಸೆ) 7ನೇ ಸ್ಥಾನ ಪಡೆದರೆ, ದಿಗ್ಗಜ ಉಸೇನ್ ಬೋಲ್ಟ್ ಉತ್ತರಾಧಿಕಾರಿ ಎಂದೇ ಬಣ್ಣಿಸಲ್ಪಟ್ಟಿರುವ ಮತ್ತು ಬಹುತೇಕ ಅವರಂತೆಯೇ ಕಾಣಿಸುವ ಜಮೈಕಾದ 23 ವರ್ಷದ ಒಬ್ಲಿಕ್ ಸೆವಿಲ್ಲೆ (9.91 ಸೆ) ಕೊನೇ ಸ್ಥಾನದೊಂದಿಗೆ ನಿರಾಸೆ ಅನುಭವಿಸಿದರು.
ಓಟದಲ್ಲಿ ಲೈಲ್ಸ್ ಉತ್ತಮ ಆರಂಭ ಕಾಣಲಿಲ್ಲ. ಆದರೆ 40 ಮೀ. ಬಳಿಕ ವೇಗ ವೃದ್ಧಿಸಿಕೊಂಡ ಲೈಲ್ಸ್, ಅರ್ಧ ರೇಸ್ ಮುಗಿದಾಗಲೂ ಕೊನೇ ಸ್ಥಾನದಲ್ಲೇ ಇದ್ದರು. ಆದರೆ ಕೊನೇ 10 ಮೀಟರ್ನಲ್ಲಿ ಒಮ್ಮೆಲೆ ಮುನ್ನುಗ್ಗಿದ ಲೈಲ್ಸ್ ಫೋಟೋಫಿನಿಷ್ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದು ವಿಶೇಷವಾಗಿತ್ತು. ಸ್ಪರ್ಧೆ ಮುಗಿದು 10 ಸೆಕೆಂಡ್ಗೂ ಅಧಿಕ ಸಮಯ ಕಳೆದರೂ ಯಾರು ಗೆದ್ದರು ಎಂಬ ಗೊಂದಲ ಓಟಗಾರರು ಮತ್ತು ಪ್ರೇಕ್ಷಕರನ್ನು ಕಾಡಿತು. ಅಂತಿಮವಾಗಿ ಸ್ಟೇಡಿಯಂನ ದೈತ್ಯಪರದೆಯಲ್ಲಿ ವಿಜೇತರ ಹೆಸರು ಪ್ರಕಟಿಸಲಾಯಿತು.
ಒಲಿಂಪಿಕ್ಸ್ನಲ್ಲಿ ಅತ್ಯಂತ ವಿಶೇಷ ಮಹತ್ವದ 100 ಮೀ. ಓಟವನ್ನು ವೀಸಲು 69 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಸ್ಟೇಡ್ ಡಿ ್ರಾನ್ಸ್ ಸ್ಟೇಡಿಯಂ ಕಿಕ್ಕಿರಿದು ತುಂಬಿತ್ತು. ಟೋಕಿಯೊ ಗೇಮ್ಸ್ನಲ್ಲಿ 100 ಮೀ. ಓಟದಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಲೈಲ್ಸ್, 200 ಮೀ. ಓಟದಲ್ಲಿ ಕಂಚಿನ ಪದಕ ಗೆಲ್ಲಲಷ್ಟೇ ಶಕ್ತರಾಗಿದ್ದರು.
*20: ಅಮೆರಿಕ 20 ವರ್ಷಗಳ ಬಳಿಕ ಒಲಿಂಪಿಕ್ಸ್ನ 100 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿತು. 2004ರ ಅಥೆನ್ಸ್ ಗೇಮ್ಸ್ನಲ್ಲಿ ಕೊನೆಯದಾಗಿ ಜಸ್ಟಿನ್ ಗ್ಯಾಟ್ಲಿನ್ ಈ ಸಾಧನೆ ಮಾಡಿದ್ದರು.
*1: ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 100 ಮೀ. ಓಟದ ಫೈನಲ್ನಲ್ಲಿ ಎಲ್ಲ 8 ಓಟಗಾರರು 10 ಸೆಕೆಂಡ್ನೊಳಗೆ ಸ್ಪರ್ಧೆ ಮುಗಿಸಿದರು.
ಫೋಟೋಫಿನಿಷ್ ಫಲಿತಾಂಶ ಲೆಕ್ಕಾಚಾರ...
ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಫೋಟೋಫಿನಿಷ್ ಆದಾಗ, ಸ್ಪರ್ಧೆಯ ವಿಡಿಯೋ ಚಿತ್ರವನ್ನು ಸೆಕೆಂಡ್ಗೆ 2,000 ಚಿತ್ರಗಳಂತೆ ವಿಂಗಡಿಸಿ ಲಿತಾಂಶ ಪರಿಶೀಲಿಸಲಾಗುತ್ತದೆ. ಹೀಗೆ ನೋಡುವಾಗ ಯಾವ ಓಟಗಾರರ ದೇಹದ ಭಾಗ ಮೊದಲಿಗೆ ಫಿನಿಷ್ ಗೆರೆಯನ್ನು ದಾಟಿದೆ ಎಂದು ಪರಾಮರ್ಶೆ ನಡೆಸಲಾಗುತ್ತದೆ. ಇಲ್ಲಿ ಥಾಮ್ಸನ್ ಕಾಲು ಮೊದಲಿಗೆ ಫಿನಿಷ್ ಗೆರೆಯನ್ನು ದಾಟಿದಂತೆ ಕಾಣಿಸಿದರೂ ಅದು ಲೆಕ್ಕಕ್ಕೆ ಬರುವುದಿಲ್ಲ. ಬದಲಿಗೆ ಓಟಗಾರರ ತಲೆ, ಎದೆ, ಹೊಟ್ಟೆ, ಸೊಂಟ ಮತ್ತು ಬೆನ್ನನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಲೈಲ್ಸ್ ತಲೆ ಮೊದಲಿಗೆ ಫಿನಿಷ್ ಗೆರೆ ಸ್ಪರ್ಶಿಸಿದ್ದರಿಂದ ಅವರನ್ನು ವಿಜೇತರನ್ನಾಗಿ ಘೋಷಿಸಲಾಯಿತು.
ಅಸ್ತಮಾ ಗೆದ್ದು ಬೀಗಿದ ಲೈಲ್ಸ್!
ಅಸ್ತಮಾ, ಅಲರ್ಜಿಗಳು, ಡಿಸ್ಲೆಕ್ಸಿಯಾ, ಆತಂಕ ಮತ್ತು ಖಿನ್ನತೆಯಿಂದ ನಾನು ಬಳಲಿದ್ದೆ. ಆದರೆ ಈಗ ಅದೆಲ್ಲವನ್ನೂ ಮೀರಿಸಿ ನನಗೆ ಬೇಕಾದುದನ್ನು ಸಾಧಿಸಿರುವೆ ಎಂದು ನೋವಾ ಲೈಲ್ಸ್ 100 ಮೀ. ಓಟದ ಗೆಲುವಿನ ಬಳಿಕ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಅವರು ಪ್ಯಾರಿಸ್ನಲ್ಲಿ ಇನ್ನೂ 2 ಚಿನ್ನ ಗೆಲ್ಲುವ ಅವಕಾಶ ಹೊಂದಿದ್ದು, 200 ಮೀ. ಮತ್ತು 4/100 ಮೀ. ರಿಲೇಯಲ್ಲೂ ಕಣಕ್ಕಿಳಿಯಲಿದ್ದಾರೆ.
*9.91: ಪ್ಯಾರಿಸ್ನಲ್ಲಿ 9.91 ಸೆಕೆಂಡ್ಗಳಲ್ಲಿ ಓಡಿದ ಸೆವಿಲ್ಲೆ ಕೊನೇ ಸ್ಥಾನಕ್ಕೆ ತೃಪ್ತಿಪಟ್ಟರು. 1988ರಲ್ಲಿ 9.92 ಸೆಕೆಂಡ್ಗಳಲ್ಲಿ ಓಡಿದ್ದ ಕಾರ್ಲ್ ಲೂಯಿಸ್ ಚಿನ್ನ ಗೆದ್ದಿದ್ದರು. ಇದೇ ಈ ಸಲದ 100 ಮೀ. ಓಟದ ಶ್ರೇಷ್ಠ ಗುಣಮಟ್ಟಕ್ಕೆ ಸಾಕ್ಷಿ ಎನಿಸಿದೆ.