

Karun Nair: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮೂಳೆ ಮುರಿದಿದ್ದರು ಬ್ಯಾಟಿಂಗ್ ಮಾಡುವುದಕ್ಕೆ ಬಂದ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಭಾರತ ತಂಡದ ಸಹ ಆಟಗಾರ ಕರುಣ್ ನಾಯರ್ ಶ್ಲಾಘಿಸಿದ್ದಾರೆ.
ಇಎಸ್‌ಪಿಎನ್ ಕ್ರಿಕ್‌ಇನ್ಫೊ ಜೊತೆ ಮಾತನಾಡಿದ ನಾಯರ್, ರಿಷಭ್ ಮುರಿದ ಕಾಲ್ಬೆರಳೊಂದಿಗೆ ಬ್ಯಾಟಿಂಗ್ ಮಾಡಲು ಹೊರಟಿದ್ದು ಸರಣಿಯ ಒಂದು ಅದ್ಭುತ ಕ್ಷಣವಾಗಿತ್ತು. ಎಲ್ಲರೂ ಇದನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು. ಇಂತಹ ಉತ್ತಮ ಆಟಗಾರ ಮತ್ತು ಮುಖ್ಯವಾಗಿ ಅವರು ಎಂತಹ ವ್ಯಕ್ತಿ ಎಂಬುದನ್ನು ಅದು ನಿಮಗೆ ತಿಳಿಸಿತು ಎಂದು ಹೇಳಿದರು.
ಅಲ್ಲದೆ, ಈ ರೀತಿ ತನಗಿಂತ ತಂಡ ಮೊದಲು ಎನ್ನುವ ತತ್ವವನ್ನು ಈ ಘಟನೆ ಕಲಿಸಿತು. ಪಂತ್ ಅವರ ಈ ವರ್ತನೆ ಇಡೀ ತಂಡವನ್ನು ರೋಮಾಂಚನಗೊಳಿಸಿತು ಎಂದು ಕರುಣ್ ನಾಯರ್ ತಿಳಿಸಿದ್ದಾರೆ.
ಓಲ್ಡ್ ಟ್ರಾಫರ್ಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಮಾಡುವಾಗ ಪಂತ್ ಗಾಯಕ್ಕೆ ಒಳಗಾದರು. ಕ್ರಿಸ್ ವೋಕ್ಸ್ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದಾಗ ಅವರ ಬಲ ಬೂಟ್‌ಗೆ ಬಾಲ್ ಬಿದ್ದು ಗಾಯವಾಯಿತು. ಆದರೆ, ಪಂತ್ ಮರುದಿನ ಬ್ಯಾಟಿಂಗ್ ಮಾಡಲು ಹಿಂತಿರುಗಿ ಬಂದು ಗಾಯಗೊಂಡ ಕಾಲಿನಿಂದ ಅರ್ಧಶತಕ ಗಳಿಸಿದರು.
ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಂತ್, ಮುಂದಿನ ತಿಂಗಳು ಆರಂಭವಾಗುವ ಏಷ್ಯಾ ಕಪ್ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಅವರು ಆಡುವುದು ಅನುಮಾನವಾಗಿದೆ ಎಂದು ವರದಿಗಳಾಗಿವೆ.
2025 ರ ಏಷ್ಯಾಕಪ್ ಸೆಪ್ಟೆಂಬರ್ 9 ರಿಂದ 28 ರವರೆಗೆ ಯುಎಇಯಲ್ಲಿ ನಡೆಯಲಿದ್ದು, ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಅಕ್ಟೋಬರ್ 2 ರಿಂದ 14 ರವರೆಗೆ ಅಹಮದಾಬಾದ್ ಮತ್ತು ದೆಹಲಿಯಲ್ಲಿ ನಡೆಯಲಿದೆ.(ಏಜೆನ್ಸೀಸ್)